
ಚಿಕ್ಕನಾಯಕನಹಳ್ಳಿ: ಬದುಕು ಎಂದರೆ ಸವಾಲುಗಳ ಮೂಟೆ. ಆದರೆ ಆ ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು, ಬಡತನದ ಬೇಗೆಯಲ್ಲೂ ಛಲ ಬಿಡದೆ ಓದಿ, ತುಮಕೂರು ವಿಶ್ವವಿದ್ಯಾನಿಲಯದ ಬಿ.ಎ. ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ವಿದ್ಯಾರ್ಥಿ ರಂಗನಾಥ್. ಜೆ. ಬಿ. ಜಿಲ್ಲೆಗೆ ಮಾದರಿಯಾಗಿದ್ದಾನೆ.
ಪ್ರೌಢಶಾಲಾ ದಿನಗಳಿಂದಲೇ ಬೀದಿ ಬೀದಿಯಲ್ಲಿ ತರಕಾರಿ, ಸೊಪುö್ಪ ಮಾರಿ ಕುಟುಂಬಕ್ಕೆ ಆಸರೆಯಾಗುತ್ತಲೇ ಈ ಸಾಧನೆ ಮಾಡಿರುವ ರಂಗನಾಥ್, ನವೋದಯ ಪದವಿ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾನೆ. ಈತನ ಅಪೂರ್ವ ಸಾಧನೆ ತಾಲ್ಲೂಕಿಗೆ, ಕಾಲೇಜಿಗೆ ಹಾಗೂ ಹೆತ್ತ ಪೋಷಕರಿಗೆ ಅಪಾರ ಕೀರ್ತಿ ತಂದಿದೆ.
ತರಕಾರಿ ಮಾರುತ್ತಲೇ ಸಾಗಿದ ಶಿಕ್ಷಣ: ರಂಗನಾಥ್ ಅವರ ಬಾಲ್ಯ ಅತ್ಯಂತ ಕಡು ಬಡತನದಲ್ಲಿ ಕಳೆಯಿತು. ಓದಬೇಕೆಂಬ ಹಂಬಲವಿದ್ದರೂ ಆರ್ಥಿಕ ಪರಿಸ್ಥಿತಿ ಪೂರಕವಾಗಿರಲಿಲ್ಲ. ಪ್ರೌಢಶಾಲೆಯ ದಿನಗಳಿಂದಲೇ ಹೊಟ್ಟೆಪಾಡಿಗಾಗಿ ಮತ್ತು ಓದಿನ ವೆಚ್ಚಕ್ಕಾಗಿ ರಸ್ತೆಯ ಬದಿಯಲ್ಲಿ ತರಕಾರಿ ಮತ್ತು ಸೊಪುö್ಪ ಮಾರಲಾರಂಭಿಸಿದ. ಹಗಲಿನಲ್ಲಿ ವ್ಯಾಪಾರ, ರಾತ್ರಿಯಲ್ಲಿ ಓದು – ಇದೇ ಆತನ ದಿನಚರಿಯಾಗಿತ್ತು.
ಅಣ್ಣನ ತ್ಯಾಗ, ಗುರುವಿನ ಮಾರ್ಗದರ್ಶನ: ರಂಗನಾಥ್ ನವೋದಯ ಕಾಲೇಜಿಗೆ ಹೆಜ್ಜೆ ಇಡುವ ಹೊತ್ತಿಗೆ ಆತನ ಅಣ್ಣ ನಂದೀಶ್ ಅಲ್ಲಿನ ಹಳೆಯ ವಿದ್ಯಾರ್ಥಿಯಾಗಿದ್ದರು. ಪದವಿ ಶಿಕ್ಷಣದ ಆರಂಭದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾದಾಗ, ರಂಗನಾಥ್ ಓದನ್ನೇ ಕೈಬಿಡಲು ನಿರ್ಧರಿಸಿದ್ದ. ಆದರೆ ಆ ಸಂದರ್ಭದಲ್ಲಿ ಆತನಿಗೆ ಆಸರೆಯಾಗಿ ನಿಂತಿದ್ದು ಕಾಲೇಜಿನ ಉಪನ್ಯಾಸಕರು ಮತ್ತು ಅಣ್ಣ ನಂದೀಶ್.
ಬಡತನಕ್ಕೆ ಹೆದರಿ ಓದು ನಿಲ್ಲಿಸಬೇಡ, ಕಷ್ಟಪಟ್ಟು ಓದು, ಜಗತ್ತನ್ನು ಗೆಲ್ಲಬಹುದು” ಎಂದು ಉಪನ್ಯಾಸಕರು ಬುದ್ಧಿಮಾತು ಹೇಳಿ ಧೈರ್ಯ ತುಂಬಿದರು. ಅಣ್ಣ ತನ್ನ ಸ್ವಂತ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ತಮ್ಮನ ಓದಿಗೆ ಬೆನ್ನೆಲುಬಾಗಿ ನಿಂತರು. ಗುರುವಿನ ಮಾರ್ಗದರ್ಶನ ಮತ್ತು ಅಣ್ಣನ ತ್ಯಾಗಕ್ಕೆ ಇಂದು ಜಯ ಸಿಕ್ಕಿದೆ.
ಮುಂದಿನ ಗುರಿ ಒSW (ಸಮಾಜ ಕಾರ್ಯ): ಪ್ರಸ್ತುತ ಬಿ.ಎ.ನಲ್ಲಿ ಬಂಗಾರದ ಪದಕದೊಂದಿಗೆ ಪ್ರಥಮ ರಾಂಕ್ ಮುಡಿಗೇರಿಸಿಕೊಂಡಿರುವ ರಂಗನಾಥ್, ತನ್ನ ಸಾಧನೆಯ ಸವಾರಿಯನ್ನು ಇಲ್ಲಿಗೇ ನಿಲ್ಲಿಸಿಲ್ಲ. ಸಮಾಜದಲ್ಲಿ ತನ್ನೂರಂತೆ ಕಷ್ಟಪಡುವ ಬಡವರ ಸೇವೆ ಮಾಡಬೇಕೆಂಬ ಆಶಯದೊಂದಿಗೆ ಈಗ ಒ.S.W (ಒಚಿsಣeಡಿ oಜಿ Soಛಿiಚಿಟ Woಡಿಞ) ಕೋರ್ಸ್ ಆಯ್ಕೆ ಮಾಡಿಕೊಂಡು ಉನ್ನತ ವ್ಯಾಸಂಗ ಮುಂದುವರಿಸಿದ್ದಾನೆ.
ಕಾಲೇಜು ಮಂಡಳಿಯಿAದ ಅಭಿನಂದನೆ: ಚಿನ್ನದ ಹುಡುಗ ರಂಗನಾಥ್ ಸಾಧನೆಗೆ ನವೋದಯ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. “ರಂಗನಾಥ್ ಕೇವಲ ನಮ್ಮ ಸಂಸ್ಥೆಯ ಹೆಮ್ಮೆಯಲ್ಲ, ಇಡೀ ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಆತ ಒಂದು ದೊಡ್ಡ ಸ್ಪೂರ್ತಿ” ಎಂದು ಕಾಲೇಜಿನ ಮಂಡಳಿ ಹಾರೈಸಿದೆ.
ಛಲವೊಂದಿದ್ದರೆ ಬಡತನ ಸಾಧನೆಗೆ ಅಡ್ಡಿಯಾಗಲ್ಲ ಎಂಬುದನ್ನು ಈ ನವೋದಯದ ಚಿನ್ನದ ಹುಡುಗ ಸಾಬೀತುಪಡಿಸಿದ್ದಾನೆ.




