
ಬೆಂಗಳೂರು: ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ರಾಜ್ಯದ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಅನಧಿಕೃತವಾಗಿ ಸಂಗ್ರಹಿಸಲಾಗಿದ್ದ ಬೀಜ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ವಶಪಡಿಸಿಕೊಂಡಿದ್ದಾರೆ. ಅನಧಿಕೃತವಾಗಿ ಬೀಜ, ರಸಗೊಬ್ಬರ ದಾಸ್ತಾನು, ಮಾರಾಟ ನಿಯಂತ್ರಿಸಲು ಕೃಷಿ ಇಲಾಖೆ ಆಯುಕ್ತ ಡಾ: ಬಿ.ಸಿ.ಸತೀಶ್ ಅವರ ಸೂಚನೆ ಮೇರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃಷಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹಾಸನ ಜಿಲ್ಲೆ ಸಾಲಗಾಮೆ ಹೋಬಳಿ ಕೊಂಡಜ್ಜಿಕೊಪ್ಪಲಿನ ಕಾರ್ತಿಕ ಟ್ರೇಡರ್ಸ್ನಲ್ಲಿ ಬೀಜ ಕಾಯ್ದೆ ೧೯೬೬ನ್ನು ಉಲ್ಲಂಘಿಸಿ ಅನುಮತಿ ಇಲ್ಲದೇ ದಾಸ್ತಾನು ಮಾಡಲಾಗಿದ್ದ ಸುಮಾರು ೮೫ಸಾವಿರ ರೂ. ಮೌಲ್ಯದ ೧೮೦ ಕೆ.ಜಿ. ಹೈಬ್ರಿಡ್ ಮೆಕ್ಕೆಜೋಳ ಬೀಜ, ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿ ಪುಷ್ಪಗಿರಿ ಅಗ್ರೋ ಕೇಂದ್ರದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು ೧೨ಸಾವಿರ ರೂ. ಮೌಲ್ಯದ ೩೦ ಕೆ.ಜಿ. ಹೈಬ್ರಿಡ್ ಮೆಕ್ಕೆಜೋಳ ಹಾಗೂ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಮದಿಹಳ್ಳಿಯ ಶ್ರೀ ವೆಂಕಟೇಶ್ವರ ಟ್ರೇಡರ್ಸ್ನಲ್ಲಿ ಕಾನೂನು ಉಲ್ಲಂಘಿಸಿ ದಾಸ್ತಾನು ಮಾಡಲಾಗಿದ್ದ ಸುಮಾರು ೧.೭೭ಲಕ್ಷ ರೂ. ಮೌಲ್ಯದ ೮೮ ಚೀಲ ಯೂರಿಯಾ, ಪಾಸ್ಫೋ ಜಿಪ್ಸಮ್ ಗ್ರ‍್ಯಾನ್ಯುಲ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮಿಡಗೇಶಿ ಹೋಬಳಿಯ ಹಸಿರು ಹೈಟೆಕ್ ಸೀಡ್ಸ್ ಕೇಂದ್ರದಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು ೮೬ಸಾವಿರ ರೂ. ಮೌಲ್ಯದ ೨೨ ಲೀಟರ್ ಸೂಕ್ಷö್ಮ ಪೋಷಕಾಂಶ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ.
ಮಂಡ್ಯ ತಾಲ್ಲೂಕು ಇಂದುವಾಳದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಸುಮಾರು ೩೦೦ ಚೀಲ ಎನ್.ಎಫ್.ಎಲ್. ಯೂರಿಯಾವನ್ನು ಮಂಡ್ಯದ ಕೃಷಿ ಅಧಿಕಾರಿಗಳು ಶನಿವಾರ ಜುಲೈ ೪ರ ರಾತ್ರಿ ವಶಪಡಿಸಿಕೊಂಡಿದ್ದಾರೆ.
ಬೀಜ, ರಸಗೊಬ್ಬರ ಮಾರಾಟಗಾರರು ನಿಯಮಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದರೆ ಕೃಷಿ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

