ಹುಳಿಯಾರು: ಸಮಾಜಮುಖಿ ಕಾರ್ಯಗಳಿಗೆ ಹಣಕ್ಕಿಂಥ ದೊಡ್ಡ ಮನಸ್ಸು ಬೇಕು ಎಂಬುದನ್ನು ಹುಳಿಯಾರಿನ ಸವಿತಾ ಸಮಾಜದ ತಂದೆ ಮತ್ತು ಇಬ್ಬರು ಮಕ್ಕಳು ಸಾಬೀತುಪಡಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಮದ್ಯವರ್ಜನ ಶಿಬಿರದ ೫೬ ಶಿಬಿರಾರ್ಥಿಗಳಿಗೆ ಸತತ ೫ ಗಂಟೆಗಳ ಕಾಲ ವಿರಮಿಸದೆ ಉಚಿತ ಕ್ಷೌರ ಸೇವೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮದ್ಯದ ವ್ಯಸನದಿಂದ ಮುಕ್ತರಾಗಿ ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಶಿಬಿರಾರ್ಥಿಗಳಿಗೆ ಈ ಉಚಿತ ಕ್ಷೌರ ಸೇವೆಯನ್ನು ಆಯೋಜಿಸಲಾಗಿತ್ತು. ಅಚ್ಚರಿ ಎಂದರೆ, ಮಧ್ಯಾಹ್ನ ೨ ಗಂಟೆಗೆ ಕತ್ತರಿ ಹಿಡಿದ ಈ ತಂದೆ-ಮಕ್ಕಳ ತಂಡ ರಾತ್ರಿ ೭:೩೦ ರವರೆಗೂ ಎಡೆಬಿಡದೆ, ದಣಿವರಿಯದೆ ಕೆಲಸ ಮಾಡಿದೆ. ಒಟ್ಟು ೫೬ ಮಂದಿಗೆ ಅಚ್ಚುಕಟ್ಟಾಗಿ ಕ್ಷೌರ ಸೇವೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ಅಪೂರ್ವ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರು ಒಂದೇ ಕುಟುಂಬದ ತಂದೆ ಮತ್ತು ಮಕ್ಕಳು ಎಂಬುದು ವಿಶೇಷ. ಹುಳಿಯಾರು ಸವಿತಾ ಸಮಾಜದ ಅಧ್ಯಕ್ಷರಾದ ಎಚ್.ಡಿ.ಚಂದ್ರಯ್ಯ (ತಂದೆ), ಎಚ್.ಸಿ.ಪ್ರವೀಣ್ ಕುಮಾರ್, ಸವಿತಾ ಸಮಾಜದ ಯುವ ಪಡೆಯ ತುಮಕೂರು ಜಿಲ್ಲಾ ಖಜಾಂಚಿ (ಮಗ), ಎಸ್.ಹರ್ಷಿತ್ ಕುಮಾರ್ ಸವಿತಾ ಸಮಾಜದ ಸಕ್ರಿಯ ಯುವ ಮುಖಂಡರು (ಮಗ). ತಂದೆಯ ಮಾರ್ಗದರ್ಶನದಲ್ಲಿ ಇಬ್ಬರು ಯುವಕರು ತೋರಿದ ಈ ಸೇವಾ ಮನೋಭಾವನೆ ಸಾರ್ವಜನಿಕರ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಮದ್ಯದ ದಾಸರಾಗಿದ್ದವರು ಹೊಸ ಮನುಷ್ಯರಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅವರಿಗೆ ನಮ್ಮ ಕಾಯಕದ ಮೂಲಕ ಅಳಿಲು ಸೇವೆ ಸಲ್ಲಿಸಿರುವುದು ನಮ್ಮ ಸೌಭಾಗ್ಯಎಂದು ಸವಿತಾ ಸಮಾಜದ ಅಧ್ಯಕ್ಷ ಎಚ್.ಡಿ.ಚಂದ್ರಯ್ಯ ಹೆಮ್ಮೆಯಿಂದ ನುಡಿದಿದ್ದಾರೆ.
ತಂದೆ-ಮಕ್ಕಳ ಈ ನಿಸ್ವಾರ್ಥ ಕಾಯಕಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು, ಶಿಬಿರಾರ್ಥಿಗಳು ಹಾಗೂ ಹುಳಿಯಾರಿನ ಸಾರ್ವಜನಿಕರು ಮುಕ್ತ ಕಂಠದಿAದ ಧನ್ಯವಾದ ಅರ್ಪಿಸಿದ್ದು, ಇವರ ಸೇವೆ ಇತರರಿಗೂ ಮಾದರಿಯಾಗಿದೆ.
(Visited 1 times, 1 visits today)





