ಯುಪಿಎಸ್ ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ – ಶಿಸ್ತು ಅಗತ್ಯ. ಕೆಲಸ ಮಾಡುವಾಗ ಸಣ್ಣಪುಟ್ಟ ತಪುö್ಪಗಳು ಆಗುವುದು ಸಹಜ. ಆದರೆ, ಅವು ಮರುಕಳಿಸದಂತೆ ಎಚ್ಚರಿಕೆ ವಹಿಸಿ, ತಪುö್ಪಗಳನ್ನು ತಿದ್ದಿಕೊಂಡು ಉತ್ತಮ ಕೆಲಸದತ್ತ ಸಾಗುವುದೇ ನಿಜವಾದ ಕಾರ್ಯಕ್ಷಮತೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತುಮಕೂರು ವಿವಿ ಕಲಾ ಕಾಲೇಜು, ಮಹಿಳಾ ಅಧ್ಯಯನ ಕೇಂದ್ರ ಹಾಗೂ ಪ್ರೆಸ್ ಕ್ಲಬ್ ವತಿಯಿಂದ ಆ.೨೪ ಸೋಮವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳೊಂದಿಗೆ ಯುವ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳೊಂದಿಗೆ ಸತ್ಯಮೇವ ಜಯತೆ ಎಂಬ ಸಂದೇಶ ಬರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಯುವ ಜನತೆಗೆ ಭವಿಷ್ಯದ ದಿಕ್ಸೂಚಿಯಾದ ಯಶಸ್ಸಿನ ಮಂತ್ರಗಳನ್ನು ಬೋಧಿಸಿದರು. ಯುಪಿಎಸ್ಸಿ ಪರೀಕ್ಷೆ ಎದುರಿಸುವ ಆಕಾಂಕ್ಷಿಗಳು ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಮತ್ತು ಶಿಸ್ತು ರೂಢಿಸಿಕೊಳ್ಳಬೇಕು. ಮೊದಲ ಪ್ರಯತ್ನದಲ್ಲಿ ಸೋತರೂ ಧೃತಿಗೆಡದೆ ತಮ್ಮ ತಪುö್ಪಗಳನ್ನು ವಿಶ್ಲೇಷಿಸಿ ಮತ್ತಷ್ಟು ಪರಿಶ್ರಮದಿಂದ ಮುನ್ನಡೆಯಬೇಕು ಎಂದರು.
ಸರ್ಕಾರಿ ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತರಾಗದೆ ಜನರ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ೩೦ ಸಾವಿರ ಕುಟುಂಬಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ವಿತರಿಸಿ ದಾಖಲೆ ಬರೆದಿರುವ ವಿಷಯವನ್ನು ಸ್ಮರಿಸಿದರು.
ಗ್ರಾಮೀಣ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ದಿನಚರಿ ನಿರ್ವಹಣೆಯ ಮೂಲಕ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಬೇಕು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಮೋಹನ್ ಹೆಚ್.ಎಸ್., ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ಪ್ರಾಧ್ಯಾಪಕರಾದ ಶೇಟ್ ಪ್ರಕಾಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್. ಯೋಗೀಶ್ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು ಉಪಸ್ಥಿತರಿದ್ದರು.
(Visited 1 times, 1 visits today)





