ಕೊರಟಗೆರೆ: ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆದರೆ ಕೊರಟಗೆರೆ ಪುರಸಭೆ ವ್ಯಾಪ್ತಿಯ ಕಲ್ಲುಗುಟ್ಟರಹಳ್ಳಿ ಹಾಗೂ ಕೃಷ್ಣರಾಜಪುರ-೨ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಎರಡೂ ಗ್ರಾಮಗಳಲ್ಲಿ ಸುಮಾರು ೧೬೫ ಮನೆಗಳಿದ್ದು, ೭೦೦ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಎರಡೂ ಗ್ರಾಮಗಳಿಗೆ ಒಂದೇ ಬೋರ್ವೆಲ್ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಬೋರ್ವೆಲ್ನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಳೆ ಕೊರತೆಯಿಂದ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದ ತಾಲೂಕಿನಲ್ಲೇ, ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಜಲಜೀವನ್ ಮಿಷನ್ ಪಂಪ್-ಮೋಟರ್ ಎಲ್ಲಿದೆ?: ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಬೋರ್ವೆಲ್ ಕೊರೆಸಲಾಗಿತ್ತು. ಆದರೆ ಬೋರ್ವೆಲ್ಗೆ ಅಳವಡಿಸಲು ತಂದಿದ್ದ ಪಂಪ್ ಮತ್ತು ಮೋಟರ್ ಇದೀಗ ಗ್ರಾಮದ ಸದಸ್ಯರೊಬ್ಬರ ಮನೆಯಲ್ಲಿ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸರ್ಕಾರಿ ಯೋಜನೆಯಡಿ ತಂದಿರುವ ಪಂಪ್-ಮೋಟರ್ ಮನೆಯಲ್ಲಿ ಏಕೆ ಇದೆ? ಅದನ್ನು ವಾಪಸ್ ಪಡೆದು ಬೋರ್ವೆಲ್ಗೆ ಅಳವಡಿಸಿ ನೀರಿನ ವ್ಯವಸ್ಥೆ ಕಲ್ಪಿಸಲು ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗಳನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಪಂಪ್-ಮೋಟರ್ ಅನ್ನು ಕೂಡಲೇ ವಾಪಸ್ ಪಡೆದು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ: ಎರಡು ಗ್ರಾಮಗಳ ನೂರಾರು ಕುಟುಂಬಗಳು ಒಂದೇ ಬೋರ್ವೆಲ್ ಮೇಲೆ ಅವಲಂಬಿತವಾಗಿರುವುದರಿAದ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಸದ್ಯ ಬೋರ್ವೆಲ್ನಲ್ಲಿಯೇ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಪರ್ಯಾಯ ನೀರಿನ ಮೂಲದ ಅಗತ್ಯವಿದೆ.
ಮಳೆಗಾಲದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವಾಗ, ಮುಂದಿನ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕ ಗ್ರಾಮಸ್ಥರದ್ದು. ಹೀಗಾಗಿ ಅಧಿಕಾರಿಗಳು ವಿಳಂಬ ಮಾಡದೆ ಮತ್ತೊಂದು ಬೋರ್ವೆಲ್ ಅಥವಾ ಶಾಶ್ವತ ಪರ್ಯಾಯ ನೀರಿನ ಮೂಲ ಕಲ್ಪಿಸಿ, ಎರಡೂ ಗ್ರಾಮಗಳಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ಪೂರೈಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
(Visited 1 times, 1 visits today)





