ತುಮಕೂರು: ಈ ಬಾರಿ ತುಮಕೂರು ದಸರಾ ಉತ್ಸವದಲ್ಲಿ ಗಣ್ಯರಿಗೆ, ಸನ್ಮಾನಿತರಿಗೆ ನೀಡುವ ಸ್ಮರಣಿಕೆ, ಸನ್ಮಾನದ ಹಾರ, ಶಾಲು ಇತ್ಯಾದಿಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಹಾಗೂ ವೇದಿಕೆಗಳ ನಿರ್ವಹಣೆ ಮತ್ತು ಸನ್ಮಾನ ಸಮಿತಿಯ ಅಧ್ಯಕ್ಷೆ ಸೋನಿಯಾ ವರ್ಣೇಕರ್ ತಿಳಿಸಿದರು.
ನಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ತುಮಕೂರು ದಸರಾ ೨೦೨೬ರ ವೇದಿಕೆಗಳ ನಿರ್ವಹಣೆ ಮತ್ತು ಸನ್ಮಾನ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಸರಾ ಉತ್ಸವದಲ್ಲಿ ಗಣ್ಯಾತಿಗಣ್ಯರಿಗೆ, ಅತಿಥಿಗಳಿಗೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ವಿಶೇಷ ಆಹ್ವಾನಿತರಿಗೆ ಹಾಗೂ ಜಿಲ್ಲಾಧಿಕಾರಿಗಳು ಸೂಚಿಸುವವರಿಗೆ ಸನ್ಮಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಸಮಿತಿಯಿಂದ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮೊಮೆಂಟೊ, ಸನ್ಮಾನಕ್ಕೆ ಶಾಲು, ಹಾರ, ಸ್ವಾಗತಕ್ಕೆ ಹೂಗುಚ್ಛಗಳ ವ್ಯವಸ್ಥೆಯನ್ನು ಮಾಡಬೇಕು, ಪ್ರತಿ ಕಾರ್ಯಕ್ರಮದ ನಂತರ ಭಾಗವಹಿಸಿದ ಕಲಾ ತಂಡಗಳಿಗೆ ಸನ್ಮಾನ ನೆರವೇರಿಸಬೇಕು, ಈ ಎಲ್ಲಾ ಕೆಲಸಗಳನ್ನು ಸಮಿತಿಯು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲರ ಸಹಕಾರ ಬೇಕು ಎಂದರು.
ಈ ಬಾರಿ ಸನ್ಮಾನಿತರಿಗೆ, ಅತಿಥಿ ಗಣ್ಯರಿಗೆ ನೀಡುವ ಹಾರ, ಸ್ಮರಣಿಕೆಗಳ ಆಯ್ಕೆಯಲ್ಲಿ ಜಿಲ್ಲೆಯ ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಲಾಗುವುದು, ಜಿಲ್ಲೆಯ ಕೈ ಮಗ್ಗದಿಂದ ತಯಾರಿಸಲಾಗುವ ಶಾಲು, ಸ್ಥಳೀಯವಾಗಿ ತಯಾರಿಸುವ ಪೇಟ, ಸ್ಮರಣಿಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಜಿಲ್ಲೆಯ ಕಲ್ಲೂರು ಮತ್ತಿತರ ಕಡೆಗಳಲ್ಲಿ ಕಾರ್ಯಕ್ರಮಕ್ಕೆ ಬೇಕಾದ ಸನ್ಮಾನ ಸಾಮಾಗ್ರಿಗಳು ದೊರೆಯುತ್ತವೆ, ಇವುಗಳನ್ನು ಪರಿಶೀಲಿಸಿ, ಸ್ಥಳೀಯತೆಗೆ ಒತ್ತು ನೋಡೋಣ ಎಂದು ತಿಳಿಸಿದರು.
ವಿಶ್ವಕರ್ಮ ಸಮುದಾಯದವರು ಅತ್ಯುತ್ತಮವಾದ ಸ್ಮರಣಿಕೆಗಳನ್ನು ತಯಾರಿಸುತ್ತಾರೆ, ಮಹಿಳಾ ಸ್ವಸಹಾಯ ಸಂಘಗಳು ಕೂಡ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ, ಅಂತಹವರಿಗೆ ಅವಕಾಶ ನೀಡುವ ಮೂಲಕ, ಸ್ಥಳೀಯ ಉತ್ಪಾದಕರಿಂದ ಖರೀದಿ ಮಾಡುವ ಮೂಲಕ ಎಲ್ಲರನ್ನೂ ಒಳಗೊಂಡು ದಸರಾ ಎಂಬ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಆಶಯವನ್ನು ಸಾಕಾರಗೊಳಿದಂತಾಗುತ್ತದೆ ಎಂದರು.
ಸಮಿತಿಯ ಸದಸ್ಯರು ಸ್ಥಳೀಯ ಉತ್ಪನ್ನಗಳ ಬಗ್ಗೆ ಮುಂದಿನ ಒಂದೆರಡು ದಿನಗಳಲ್ಲಿ ಸಮಿತಿಗೆ ಮಾಹಿತಿ ನೀಡಬೇಕು, ಸಮಯವಕಾಶ ಕಡಿಮೆ ಇರುವುದರಿಂದ ವೆಚ್ಚಗಳಿಗೆ ಸಂಬAಧಿಸಿದAತೆ ಸಮಗ್ರ ಅಂದಾಜು ಪಟ್ಟಿಯನ್ನು ತಯಾರಿಸಿ, ಸಾಕಷ್ಟು ಮುಂಚಿತವಾಗಿ ಪ್ರಧಾನ ಸಮಿತಿಗೆ ಸಲ್ಲಿಸಿ ಪೂರ್ವಾನುಮತಿ ಪಡೆಯಬೇಕಿದೆ. ಹಾಗಾಗಿ ಸೋಮವಾರದ ಒಳಗೆ ಸನ್ಮಾನ ಸಾಮಾಗ್ರಿಗಳ ಖರೀದಿ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಬೇಕಿದೆ. ಸೋಮವಾರ ಮತ್ತೊಮ್ಮೆ ಸಭೆ ಕರೆದು, ಆ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಮಹಾಲಿಂಗ, ವಿಜಯ್ ಕುಮಾರ್, ಅಧಿಕಾರೇತರ ಸದಸ್ಯರುಗಳಾದ ಅಶ್ವತ್ಥ್ ನಾರಾಯಣ ಕೊರಟಗೆರೆ, ಕೆ.ಎಂ.ಸುಜಾತ, ಕವಿತಾ, ಲೀಲಮ್ಮ, ಅಶೋಕ್ ಆರ್.ಪಿ, ಯೋಗೀಶ್ ಮಳೆಕಲ್ಲಹಳ್ಳಿ, ಹೇಮಂತ್ ಎನ್, ವಾಜಿದ್ ಖಾನ್ ಉಪಸ್ಥಿತರಿದ್ದರು.
(Visited 1 times, 1 visits today)





