ತುಮಕೂರು: ಯುವಜನರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂಸದೀಯ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚಂದ್ರಕುಮಾರ್ ತಿಳಿಸಿದರು.
ವಿದ್ಯಾರ್ಥಿಗಳಿಗೆ ವಿಧಾನಸಭೆಯ ಕಾರ್ಯವಿಧಾನ, ಪ್ರಶ್ನೋತ್ತರ ಅವಧಿ, ಚರ್ಚೆ, ವಿಧೇಯಕಗಳ ಮಂಡನೆ ಸೇರಿದಂತೆ ಸಂಸದೀಯ ಪ್ರಕ್ರಿಯೆಗಳ ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ನಾಯಕತ್ವ ಗುಣ, ಪ್ರಜಾಸತ್ತಾತ್ಮಕ ಚಿಂತನೆ ಮತ್ತು ಸಂವಿಧಾನದ ಮೌಲ್ಯಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ನಗರದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಯುವ ಸಂಸತ್ತು ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿನಿಂದ ವಿದ್ಯಾರ್ಥಿಗಳನ್ನು ಕರೆತರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಅಲ್ಲದೆ, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಚರ್ಚಾ ಸಾಮರ್ಥ್ಯ ಮತ್ತು ವಿಷಯ ಮಂಡನೆಯನ್ನು ಮೌಲ್ಯಮಾಪನ ಮಾಡಲು ತೀರ್ಪುಗಾರರ ಆಯ್ಕೆ ಕುರಿತು ಚರ್ಚಿಸಲಾಯಿತು. ವಿವಿಧ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿ ಕಾರ್ಯಕ್ರಮದ ಆಯೋಜನೆ ಕುರಿತು ತಮ್ಮ ಸಲಹೆಗಳನ್ನು ನೀಡಿದರು
ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ವಿಷಯ ಮಂಡಿಸುವ ಹಾಗೂ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳನ್ನು ತೀರ್ಪುಗಾರರ ಮೂಲಕ ಆಯ್ಕೆ ಮಾಡಿ ರಾಜ್ಯ ಮಟ್ಟದ ಯುವ ಸಂಸತ್ತಿಗೆ ಕಳುಹಿಸಿಕೊಡುವ ಪ್ರಕ್ರಿಯೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ರಾಧ, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸೇರಿದಂತೆ ಮತ್ತಿತರರು ಹಾಜರಿದ್ದರು.
(Visited 1 times, 1 visits today)





