ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ರಾಜಕೀಯ ರಂಗೇರಿದೆ. ಚುನಾವಣೆಗೂ ಮುಂಚಿತವಾಗಿ ರಣಕಹಳೆ ಮೊಳಗಿದ್ದು, ಮೀಸಲಾತಿ ನಿಗದಿಯ ಹಿಂದೆ ಆಡಳಿತರೂಢ ಕಾಂಗ್ರೆಸ್‌ನ ಕೈವಾಡವಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ದಶಕಗಳ ಕನಸು ಹೊತ್ತು ಕ್ಷೇತ್ರಗಳಲ್ಲಿ ಬೆವರು ಹರಿಸಿದ್ದ ಪ್ರತಿಪಕ್ಷಗಳ ಪ್ರಬಲ ಆಕಾಂಕ್ಷಿಗಳಿಗೆ ಈ ಮೀಸಲಾತಿ ದೊಡ್ಡ ಆಘಾತವನ್ನೇ ನೀಡಿದೆ.
ಮೀಸಲಾತಿ ಮಸಲತ್ತು: ವಿಪಕ್ಷಗಳ ಪ್ರಬಲ ಆಕಾಂಕ್ಷಿಗಳಿಗೆ ಶಾಕ್: ಕಳೆದ ೧೦ ವರ್ಷಗಳಿಂದ ಜಿಲ್ಲಾ ಪಂಚಾಯತ್ ಪ್ರವೇಶಿಸಲು ಸಿದ್ಧತೆ ನಡೆಸಿ, ಹಳ್ಳಿ-ಹಳ್ಳಿಗೆ ಸುತ್ತಿದ್ದ ಜೆಡಿಎಸ್ ಹಾಗೂ ಬಿಜೆಪಿಯ ಅನೇಕ ಆಕಾಂಕ್ಷಿಗಳಿಗೆ ಮೀಸಲಾತಿಯ ಬಲೆ ಗೂಟದಂತೆ ಅಡ್ಡಬಂದಿದೆ. ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ದಬ್ಬಗುಂಟೆ ರವಿಕುಮಾರ್, ಕಂದಿಕೆರೆಯಲ್ಲಿ ಶ್ರೀಹರ್ಷ, ಹಂದನಕೆರೆಯಲ್ಲಿ ರಾಮಚಂದ್ರಯ್ಯ ಹಾಗೂ ಶೆಟ್ಟಿಕೆರೆ ಕ್ಷೇತ್ರದಲ್ಲಿ ಹೊನ್ನೇಬಾಗಿ ಶಶಿದರ್, ಕಲ್ಲೇಶ್, ಶಿವಪ್ರಕಾಶ್ ಸೇರಿದಂತೆ ಹಲವಾರು ಪ್ರಬಲ ಮುಖಂಡರಿಗೆ ಸ್ಪರ್ಧಾ ಅವಕಾಶವೇ ಇಲ್ಲದಂತಾಗಿದೆ.
ಕಾAಗ್ರೆಸ್‌ಗೆ ‘ಲಕ್ಕಿ’ ಮೀಸಲಾತಿ: ಕೈ ನಾಯಕರಿಗೆ ಸುಲಭದ ಹಾದಿ?: ಯಳನಾಡು ಕ್ಷೇತ್ರ ಸಾಮಾನ್ಯ, ಹೊಯ್ಸಳಕಟ್ಟೆ ಬಿಸಿಎಂ ‘ಎ’, ಶೆಟ್ಟಿಕೆರೆ ಸಾಮಾನ್ಯ ಮಹಿಳೆ, ಹಂದನಕೆರೆ ಎಸ್‌ಸಿ ಮಹಿಳೆ ಹಾಗೂ ಕಂದಿಕೆರೆ ಎಸ್‌ಟಿ ಜಾತಿಗೆ ಮೀಸಲಾಗಿದ್ದು, ಇದು ಕಾಂಗ್ರೆಸ್ ನಾಯಕರ ಗೆಲುವಿನ ಹಾದಿಯನ್ನು ಸುಲಭಗೊಳಿಸಿದೆ ಎಂಬ ಗುಸುಗುಸು ತಾಲೂಕಿನಲ್ಲಿ ಜೋರಾಗಿದೆ.
ಹೊಯ್ಸಳಕಟ್ಟೆ ಕ್ಷೇತ್ರ ಬಿಸಿಎಂ ‘ಎ’ ಮೀಸಲಾಗಿರುವುದರಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ ಅಥವಾ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಅವರ ತಮ್ಮ ಡಾ.ಲೋಕೇಶ್ ಕಣಕ್ಕಿಳಿಯುವ ದಾರಿ ಸುಗಮವಾಗಿದೆ, ಜೆಡಿಎಸ್-ಬಿಜೆಪಿಗೆ ಇಲ್ಲಿ ಬಲವಾದ ಅಭ್ಯರ್ಥಿಯ ಹುಡುಕಾಟವೇ ದೊಡ್ಡ ತಲೆನೋವಾಗಿದೆ.
ಎಸ್‌ಟಿ ಮೀಸಲಾತಿ ಒಳಮರ್ಮ: ರಾಜಣ್ಣ ಪ್ರಭಾವದ ಬಗ್ಗೆ ಅನುಮಾನ: ಕಂದಿಕೆರೆ ಕ್ಷೇತ್ರದಿಂದ ಜೆಡಿಎಸ್‌ನಿಂದಲೇ ಸ್ಪರ್ಧಿಸಲು ಎಲ್ಲಾ ರೀತಿಯಿಂದಲೂ ಸಿದ್ಧತೆ ನಡೆಸಿದ್ದ ಸಿಂಗದಹಳ್ಳಿ ರಾಜಕುಮಾರ್ ಸೇರಿದಂತೆ ಈ ಹಿಂದೆ ಜೆಡಿಎಸ್‌ನಲ್ಲಿ ದೀರ್ಘಕಾಲದಿಂದ ಪ್ರಾಮಾಣಿಕವಾಗಿ ದುಡಿದು ಸಂಘಟನೆ ಮಾಡಿದ್ದ ಇತರೆ ಮುಖಂಡರಿಗೂ ಸ್ಪರ್ಧಿಸುವ ಅವಕಾಶ ಸಂಪೂರ್ಣವಾಗಿ ತಪ್ಪಿಹೋಗಿದೆ.
ಸಿಂಗದಹಳ್ಳಿ ರಾಜಕುಮಾರ್ ಅವರು ಸಚಿವ ಕೆ.ಎನ್.ರಾಜಣ್ಣ ಅವರ ಆಪ್ತ ಶಿಷ್ಯರಾಗಿರುವುದರಿಂದಲೇ, ರಾಜಣ್ಣ ಅವರ ಪ್ರಭಾವ ಬಳಸಿ ಕಂದಿಕೆರೆ ಕ್ಷೇತ್ರವನ್ನು ಎಸ್‌ಟಿ ಮೀಸಲಾತಿಯನ್ನಾಗಿ ಮಾಡಿಸಲಾಗಿದೆ ಎಂಬ ಊಹಾಪೋಹ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಹುಳಿಯಾರು ರಣಕಹಳೆ ಹಾಗೂ ಶೆಟ್ಟಿಕೆರೆ ಕಾನೂನು ಸಮರ: ಯಳನಾಡು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿAದ ಮಾಜಿ ಜಿ.ಪಂ. ಸದಸ್ಯ ವೈ.ಸಿ.ಸಿದ್ದರಾಮಯ್ಯ, ಯುವ ಕಾಂಗ್ರೆಸ್‌ನ ಮಣಿಕಂಠ, ಜಿಪಂ ಮಾಜಿ ಸದಸ್ಯ ಹೊನ್ನಪ್ಪ ಅವರ ಪುತ್ರ ಅಶೋಕ್ ಹೀಗೆ ಆಕಾಂಕ್ಷಿಗಳ ದಂಡೇ ಇದೆ. ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಬೆಂಬಲದೊAದಿಗೆ ವೈ.ಆರ್.ಮಲ್ಲಿಕಾರ್ಜುನಯ್ಯ ಅಥವಾ ಅವರ ಪುತ್ರ ಬಸವರಾಜೇಂದ್ರ, ಜೆಡಿಎಸ್‌ನಿಂದ ಮಾಜಿ ಜಿಪಂ ಸದಸ್ಯೆ ಮಂಜುಳಾ, ಹನುಮಂತಪ್ಪ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮೀಸಲಾತಿ ವಂಚಿತ ಶೆಟ್ಟಿಕೆರೆ: ಅನೇಕ ವರ್ಷಗಳಿಂದ ಶೆಟ್ಟಿಕೆರೆ ಕ್ಷೇತ್ರಕ್ಕೆ ಎಸ್‌ಸಿ/ಎಸ್‌ಟಿ ಮೀಸಲು ನಿಗದಿಯಾಗದಿರುವುದು ಸಾಮಾಜಿಕ ನ್ಯಾಯಕ್ಕೆ ಮಾಡಿದ ದ್ರೋಹ ಎಂಬ ಅಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶೆಟ್ಟಿಕೆರೆ ಭಾಗದ ದಲಿತ ಮತ್ತು ದಲಿತಪರ ಮುಖಂಡರು ಮೀಸಲಾತಿ ವಿರುದ್ಧ ಧ್ವನಿ ಎತ್ತಿದ್ದು, ಈ ಕುರಿತು ನ್ಯಾಯಾಲಯದ ಮೊರೆ ಹೋದರೆ ಮೀಸಲಾತಿ ಬದಲಾಗುವುದರ ಸಾಧ್ಯತೆ ದಟ್ಟವಾಗಿದೆ.
ಚಿಕ್ಕನಾಯಕನಹಳ್ಳಿ ಜಿ.ಪಂ. ಅಖಾಡದಲ್ಲಿ ಮೀಸಲಾತಿಯ ಹಗ್ಗಜಗ್ಗಾಟ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲ. ಪ್ರತಿಪಕ್ಷಗಳು ಇದನ್ನು ರಾಜಕೀಯ ಷಡ್ಯಂತ್ರ ಎಂದು ಬಿಂಬಿಸುತ್ತಿದ್ದರೆ, ಜೆಡಿಎಸ್ ಪಕ್ಷದಲ್ಲಂತೂ ಮೀಸಲಾತಿಯಿಂದ ಅಲ್ಲೋಲ ಕಲ್ಲೋಲ ಆಗುತ್ತಿದೆ. ಬಿಜೆಪಿ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕಾಂಗ್ರೆಸ್ ಮಾತ್ರ ಎಲ್ಲಾ ಕ್ಷೇತ್ರಕ್ಕೂ ಈಗಾಗಲೇ ಅಭ್ಯರ್ಥಿಗಳನ್ನು ಸಿದ್ಧಪಡಿಸಿಕೊಂಡಿದೆ. ಮೀಸಲಾತಿ ವಂಚಿತ ಸಮುದಾಯದವರು ಹೋರಾಟದ ಬಗ್ಗೆ ಚಿಂತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
(Visited 1 times, 1 visits today)





