ತುಮಕೂರು: ವಿಶ್ವ ಪೋಲಿಯೊ ದಿನದ ಅಂಗವಾಗಿ ನಗರದ ವಿವಿಧ ರೋಟರಿ, ಇನ್ನರ್ ವ್ಹೀಲ್ ಸಂಸ್ಥೆಗಳು ಶನಿವಾರ ನಗರದಲ್ಲಿ ಪಲ್ಸ್ ಪೋಲಿಯೊ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಂಡಿದ್ದವು. ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಬಿಜಿಎಸ್ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದರು. ವಿವಿಧ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಿಜಿಎಸ್ ವೃತ್ತದಲ್ಲಿ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಅಸ್ಗರ್ ಬೇಗ್ ಪೋಲಿಯೊ ಜಾಥಾಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಡಾ. ಅಸ್ಗರ್ ಬೇಗ್, ಪ್ರತಿ ವರ್ಷ ಅಕ್ಟೋಬರ್ 24ರಂದು ವಿಶ್ವ ಪೋಲಿಯೊ ದಿನ ಆಚರಿಸಲಾಗುತ್ತದೆ. ಪೋಲಿಯೋ ಎಂಬ ಗಂಭೀರ ಹಾಗೂ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಗೌರವಿಸುವುದು ಈ ದಿನದ ಉದ್ದೇಶವಾಗಿದೆ ಎಂದು ಹೇಳಿದರು.
ಭಾರತವು ಪೋಲಿಯೋ ಮುಕ್ತವಾಗಿದೆ. ಆದರೂ ನೆರೆ ದೇಶಗಳಲ್ಲಿ ಈ ರೋಗ ಉಳಿದಿರುವುದರಿಂದ ಅದು ಭಾರತಕ್ಕೆ ಹರಡುವುದನ್ನು ತಡೆಯಲು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಂಘಸಂಸ್ಥೆಗಳು ಸಹಕರಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ರೋಟರಿ ಜಿಲ್ಲೆ ಲೆಫ್ಟಿನೆಂಟ್ ಗೌರ್ನರ್ ಬಿಳಿಗಿರೆ ಶಿವಕುಮಾರ್ ಮಾತನಾಡಿ, ಪ್ರಪಂಚದಾದ್ಯಂತ ಪೋಲಿಯೊವನ್ನು ನಿರ್ಮೂಲನೆ ಮಾಡಬೇಕು ಎಂದು ಎಲ್ಲಾ ದೇಶಗಳ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು ವಿವಿಧ ರೂಪದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ತುಮಕೂರಿನಲ್ಲಿ ಎಲ್ಲಾ ರೋಟರಿ ಸಂಸ್ಥೆಗಳು, ಇನ್ನರ್ ವ್ಹೀಲ್ ಸಂಸ್ಥೆಗಳ ಸದಸ್ಯರು ಈ ದಿನದ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಎಲ್ಲಾ ತಾಯಂದಿರು ಮಗು ಹುಟ್ಟಿದಾಗಿನಿಂದ ಐದು ವರ್ಷದವರೆಗೆ ಪ್ರತಿ ವರ್ಷ ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು ಎಂದು ಮನವಿ ಮಾಡಿದರು.
ಪೂರ್ವ ಜಿಲ್ಲಾ ಗವರ್ನರ್ ಆಶಾ ಪ್ರಸನ್ನ ಕುಮಾರ್ ಮಾತನಾಡಿ, ಭಾರತವು ಪೋಲಿಯೋ ವಿರುದ್ಧ ಸುದೀರ್ಘ ಮತ್ತು ಯಶಸ್ವಿ ಹೋರಾಟ ನಡೆಸಿದೆ. ಪಲ್ಸ್ ಪೋಲಿಯೋ ಅಭಿಯಾನದ ಮೂಲಕ ಲಕ್ಷಾಂತರ ಮಕ್ಕಳಿಗೆ ಉಚಿತವಾಗಿ ಪೋಲಿಯೊ ಲಸಿಕೆ ನೀಡಲಾಗಿದೆ. ಅದರ ಫಲವಾಗಿ 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೊ ಮುಕ್ತ ದೇಶವೆಂದು ಘೋಷಿಸಿತು. ಆದರೂ ನೆರೆಯ ದೇಶಗಳಾದ ಪಾಕಿಸ್ತಾನ, ಆಫ್ಗಾನಿಸ್ತಾನದಲ್ಲಿ ಪೋಲಿಯೋ ಕಾಯಿಲೆ ಉಳಿದಿರುವುದರಿಂದ ಭಾರತದಲ್ಲಿ ಲಸಿಕೆ ನೀಡುವ ಅಭಿಯಾನ ಮುಂದುವರೆದಿದೆ ಎಂದು ಹೇಳಿದರು.
ರೋಟರಿ ಜೋನಲ್ ಗವರ್ನರ್ ಪ್ರಮೀಳಾ ಶಿವಕುಮಾರ್, ಅಸಿಸ್ಟೆಂಟ್ ಗವರ್ನರ್ ಸಿ. ನಾಗರಾಜ್ ರೋಟರಿ ತುಮಕೂರಿನ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್, ರೋಟರಿ ಈಸ್ಟ್ ಅಧ್ಯಕ್ಷ ಕಿಶೋರ್, ರೋಟರಿ ತುಮಕೂರು ಸೆಂಟ್ರಲ್ ಅಧ್ಯಕ್ಷ ಕೃಷ್ಣಕುಮಾರ್, ರೋಟರಿ ತುಮಕೂರು ಪ್ರೇರಣ ಅಧ್ಯಕ್ಷ ಎಸ್. ರಘು, ರೋಟರಿ ತುಮಕೂರು ಯಲ್ಲಾಪುರ ಗೇಟ್ ಅಧ್ಯಕ್ಷ ಚಂದ್ರಶೇಖರ್, ಇನ್ನರ್ ವ್ಹೀಲ್, ತುಮಕೂರು ಅಧ್ಯಕ್ಷೆ ರೇಖಾ ಶಿವಕುಮಾರ್, ಇನ್ನರ್ ವ್ಹೀಲ್ ಸೆಂಟ್ರಲ್ ಅಧ್ಯಕ್ಷೆ ಲೀಲಾವತಿ ಅಶೋಕ್, ಇನ್ನರ್ ವೀಲ್ ಈಸ್ಟ್ ಅಧ್ಯಕ್ಷೆ ಪ್ರಿಯದರ್ಶಿನಿ, ಇನ್ನರ್ ವ್ಹೀಲ್ ಮರಳೂರು ಅಧ್ಯಕ್ಷೆ ಲತಾ, ರೊಟೇರಿಯನ್ಗಳಾದ ಬೆಳ್ಳಿ ಲೋಕೇಶ್, ಟಿ.ಆರ್. ಸದಾಶಿವಯ್ಯ, ಕಾಂತಿಲಾಲ್ ಸೇರಿದಂತೆ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿಗಳು ಪೋಲಿಯೊ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.
(Visited 1 times, 1 visits today)





