ಕೊರಟಗೆರೆ: ವಿಧಾನ ಸಭಾ ಕ್ಷೇತ್ರದ (ಪ.ಜಾ) ಮೀಸಲು ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಕ್ಷೇತ್ರದಲ್ಲಿ ಒಟ್ಟು 1,95,244 ಮತದಾರರು ಅಂತಿಮಗೊಂಡಿದ್ದಾರೆ ಎಂದು ಮತದಾರರ ನೊಂದಾಣಾಧಿಕಾರಿ ಸೋಮಪ್ಪ ಕಡುಕೋಳ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾ ಹಾಗೂ ಸರ್ವರಾಜಕೀಯ ಪಕ್ಷಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಎಸ್ಐಆರ್ ಪೂರ್ವದಲ್ಲಿ ಕ್ಷೇತ್ರದಲ್ಲಿ 2,09,495 ಮತದಾರರಿದ್ದರು. ಕರಡು ಪಟ್ಟಿಯಲ್ಲಿ 1,92,748ಕ್ಕೆ ಇಳಿಕೆಯಾಗಿದ್ದು, ಅಂತಿಮವಾಗಿ 1,95,244 ಮತದಾರರು ದೃಢೀಕೃತಗೊಂಡಿದ್ದಾರೆ. ಇದರಲ್ಲಿ ಪುರುಷರು 96,715, ಮಹಿಳೆಯರು 98,523, ತೃತೀಯ ಲಿಂಗಿಗಳು 6 ಮಂದಿ ಇದ್ದಾರೆ. ಲಿಂಗಾನುಪಾತ 1019 ಇದೆ ಎಂದರು.
ಕ್ಷೇತ್ರದಲ್ಲಿ ಒಟ್ಟು 256 ಮತಗಟ್ಟೆಗಳಿದ್ದು, ಹೊಸದಾಗಿ 2,786 ಮತದಾರರ ಸೇರ್ಪಡೆಯಾಗಿದ್ದು, 290 ಮತದಾರರ ಹೆಸರು ಬಿಡತಕ್ಕವಾಗಿದೆ. ನಿವ್ವಳ 2,496 ಮತದಾರರು ಹೆಚ್ಚಾಗಿದ್ದಾರೆ. 18-19 ವಯಸ್ಸಿನ 2,637 ಯುವ ಮತದಾರರು ಹಾಗೂ 2,552 ವಿಕಲಚೇತನ ಮತದಾರರು ಇದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ 10,557 ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗಿದೆ. ಮರಣ 6,112, ಶಾಶ್ವತ ಸ್ಥಳಾಂತರ 7,705, ಪತ್ತೆಯಾಗದೇ ಇರುವವರು 516, ಈಗಾಗಲೇ ನೋಂದಣಿ 2,414 ಸೇರಿ ಒಟ್ಟು 16,747 ಮತಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಶರತ್ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಬಿಜೆಪಿ ಅಧ್ಯಕ್ಷ ರುದ್ರೇಶ್, ಲಕ್ಷ್ಮಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಕಾಂಗ್ರೆಸ್ನ ರಘುವೀರ್, ಹನುಮಂತರಾಜು, ಸೇರಿದಂತೆ ಇತರರು ಇದ್ದರು.
(Visited 1 times, 1 visits today)





