ತುಮಕೂರು: ಕನ್ನಡ ನಾಡಿನ ಅಸ್ಮಿತೆಯಾಗಿರುವ ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಯೂರ ವೇದಿಕೆಯ ಅಧ್ಯಕ್ಷ ಪಿ. ಸದಾಶಿವಯ್ಯ ಒತ್ತಾಯಿಸಿದು.
ನಗರದ ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿರುವ ಹಳ್ಳಿ ಮರದ ಸರ್ಕಲ್ನಲ್ಲಿ ಮಯೂರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಾಡಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಧ್ವಜಕ್ಕೆ ರಾಷ್ಟ್ರಧ್ವಜದ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಈ ಮೂಲಕ ಕನ್ನಡಿಗರ ಹಿತವನ್ನು ಕಾಪಾಡಬೇಕು ಎಂದು ಅವರು ಹೇಳಿದರು.
ಕನ್ನಡ ನಾಡು ನುಡಿ, ನೆಲ, ಜಲ, ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿದೆ. ಕನ್ನಡ ನಾಡಿನ ನೆಲ, ಜಲ ಸಂರಕ್ಷಣೆಗಾಗಿ ನಾವೆಲ್ಲಾ ಕಂಕಣಬದ್ಧರಾಗಿ ದುಡಿಯೋಣ ಎಂದು ಕರೆ ನೀಡಿದರು.
ಕನ್ನಡ ಭಾಷೆ ಎಲ್ಲರ ಹೃದಯದ ಭಾಷೆಯಾಗಬೇಕು. ನಮ್ಮ ಮಾತೃಭಾಷೆ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.
ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಈ ಮೂಲಕ ನಮ್ಮ ನೆಲ, ಜಲ ಹಾಗೂ ಭಾಷೆಗೆ ಧಕ್ಕೆ ಬಂದಾಗ ಹೋರಾಟ ನಡೆಸುವ ಮನೋಭಾವ ಹೊಂದಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಮುಖ್ಯಸ್ಥರಾದ ವರುಣ್ ರವರ ನೇತೃತ್ವದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ, ಮಾಜಿ ನಗರಪಾಲಿಕೆ ಸದಸ್ಯರಾದ ಕರುಣ ಆರಾಧ್ಯ, ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ್, ಟಿ.ಬಿ. ಜಗದೀಶ್, ಚಂದ್ರಶೇಖರ್, ರಾಜಕುಮಾರ್ ಗುಪ್ತ, ರೇಣುಕಯ್ಯ. ಸಿದ್ದು, ಮಂಜು, ರವಿ ಚೆಂಗಾವಿ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)





