ತುಮಕೂರು: ತುಮಕೂರು ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕವಾಗಿ ಅಧಿಕಾರ ವಹಿಸಿಕೊಂಡ ಸಿ.ನರೇಂದ್ರರವರನ್ನು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಭೇಟಿ ಮಾಡಿ ಅಭಿನಂದನೆಯನ್ನು ಸಲ್ಲಿಸಿ ಕೆಲವು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಕುರಿತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ. ನಿಧಿಕುಮಾರ್ ಮಾತನಾಡಿ ತಮ್ಮ ಮನವಿ ಪತ್ರದಲ್ಲಿ ವಿವಿಧ ಯೋಜನೆಗಳ ಕಾರ್ಯರೂಪ ಸೇರಿದಂತೆ ವಿವಿಧ ಬೇಡಿಕೆಯುಳ್ಳ ವಿವಿರವಾದ ಮನವಿಯನ್ನು ಮಾನ್ಯ ಅಧ್ಯಕ್ಷರಲ್ಲಿ ಸಲ್ಲಿಸಿದ್ದು ಅದರಲ್ಲಿ ವಿಶೇಷವಾಗಿ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್. ರವರ ಹೆಸರಿನಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದವರಿಗೆ ಆರ್ಥಿಕವಾಗಿ ಸಬಲರಾಗಲು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಸೇರಿದಂತೆ ನಿಗಮ ಮಂಡಳಿಯ ಕಛೇರಿಯು ಬಾಡಿಗೆ ಆಧಾರದಲ್ಲಿ ನಡೆಯುತ್ತಿದ್ದು ಅದಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಶಾಶ್ವತ ಸ್ವಂತ ಕಛೇರಿಯನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಐ.ಎ.ಎಸ್. ಕೆ.ಎ.ಎಸ್. ಮತ್ತು ಇನ್ನೂ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ತರಬೇತಿ ಕೇಂದ್ರ ಹಾಗೂ ವಸತಿ ನಿಲಯವನ್ನು ತುಮಕೂರು ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆ ಮಾಡಲು ಸಂಬಂಧಪಟ್ಟ ಸರ್ಕಾರ ಮತ್ತು ಸಚಿವರಿಗೆ ತಾವುಗಳು ಶಿಫಾರಸ್ಸು ಮಾಡಿ ಜಿಲ್ಲಾ ಕೇಂದ್ರದಲ್ಲಿ ಮಂಜೂರು ಮಾಡಿಸಿಕೊಡುವಂತೆಯು ಸಹ ಮನವಿಯಲ್ಲಿ ಉಲ್ಲೇಖಿಸಿದ್ದೇವೆಂದು ತಿಳಿಸಿದರು.
ದಲಿತ ಮುಖಂಡರು ಹಾಗೂ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ. ಮಾತನಾಡಿ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಪ್ರಸ್ತುತವಿರುವ ಜಮೀನಿನ ಮಿತಿ 1-20 ಇದ್ದು ಅದನ್ನು 1-00 ಎಕರೆಗೆ ನಿಗಧಿಗೊಳಿಸಿದಲ್ಲಿ ಅತೀ ಸಣ್ಣ ರೈತರು ಸಹ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅನುಕೂಲವಾಗುತ್ತದೆ ಹಾಗೂ ಮೆರಿಟ್ ಆಧಾರದ ಮೇಲೆ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವುದರ ಮೂಲಕ ಪರಿಶಿಷ್ಠ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮನವಿಯಲ್ಲಿ ಕೋರಿದ್ದೇವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್. ಕೆ ನಿಧಿ ಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷರು ಇಂದ್ರಕುಮಾರ್ ಡಿ.ಕೆ, ಸಂವಿಧಾನ ರಕ್ಷಣಾ ಕ್ರಾಂತಿಸೇನೆ ವೇದಿಕೆ ರಾಜ್ಯಾಧ್ಯಕ್ಷರು ಪ್ರಕಾಶ್ ಎಚ್.ಪಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷರಾದ ಬಿ.ಜಿ.ಲಿಂಗರಾಜ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ದೇವರಾಜ್, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರು ಗೋವಿಂದ ರಾಜ್ ಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)





