ತುಮಕೂರು: ತುಮಕೂರು ನಗರ ಹಾಗೂ ಸುತ್ತಮುತ್ತ ಪ್ರದೇಶಗಳಿಂದ ಸಂಚರಿಸುವ ಖಾಸಗಿ ಬಸ್ಸುಗಳ ದರ ಶೇ17 ರಿಂದ 20 ರಷ್ಟು ಹೆಚ್ಚಳ ಮಾಡಿದ್ದು, ಈ ದರವೂ ಇಂದಿನಿಂದಲೇ ಜಾರಿಗೆ ಬರಲಿದೆ ಎಂದು ತುಮಕೂರು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಬಿ.ಎಸ್.ಶಿವಕುಮಾರ್, ಕಾರ್ಯದರ್ಶಿ ಶಂಕರ್ ನಾರಾಯಣ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೊನೆಯದಾಗಿ 2021ರಲ್ಲಿ ದರ ಹೆಚ್ಚಳ ಮಾಡಲಾಗಿತ್ತು. ತದ ನಂತರದಲ್ಲಿ ಮೂರು ಬಾರಿ ಡಿಸೇಲ್, ಪೆಟ್ರೋಲ್ ದರ ಹೆಚ್ಚಾದರೂ ಕೋವಿಡ್ ಮತ್ತು ಶಕ್ತಿಯ ಯೋಜನೆ ಪ್ರಭಾವದಿಂದಾಗಿ ಖಾಸಗಿ ಬಸ್ಸುಗಳ ದರ ಹೆಚ್ಚಳ ಮಾಡಿರಲಿಲ್ಲ.ಆದರೆ ಈಗ ಅನಿವಾರ್ಯವಾಗಿ, ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ನಿಯಮಗಳಿಗೆ ಅನುಗುಣಮವಾಗಿಯೇ ಅಳೆದು ತೂಗಿ, ಗ್ರಾಹಕರ ಚೇಬಿಗೆ ಹೊರಯಾಗದಂತೆ ಬಸ್ ದರಗಳನ್ನು ಹೆಚ್ಚಿಗೆ ಮಾಡಲಾಗಿದೆ. ಬಸ್ ದರವೂ ಕಿ.ಮಿ. ಲೆಕ್ಕಾಚಾರದಲ್ಲಿ ಕನಿಷ್ಠ ಐದು ರೂ ಮತ್ತು ಗರಿಷ್ಠ 20 ವರೆಗೆ ಹೆಚ್ಚಳವಾಗಲಿದೆ.ಇದು ಗ್ರಾಹಕರಿಗೆ ಅಂತಹ ಹೊರಯಾಗಲಾರದು ಎಂದರು.
ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ನಿಯಮಗಳ ಪ್ರಕಾರ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ಗಳ ದರಗಳ ನಡುವೆ ವೆತ್ಯಾಸ ಇರಬಾರದು.ಆದರೆ ಕೆ.ಎಸ್.ಆರ್.ಟಿ.ಸಿ.ಯವರು ಹೆಚ್ಚು ಜನರು ಓಡಾಡುವ ಶಿರಾ-ತುಮಕೂರು, ತುಮಕೂರು- ಬೆಂಗಳೂರು ನಡುವೆ ಒಂದೇ ದರವಿದ್ದರೂ, ಗ್ರಾಮೀಣ ಭಾಗಗಳಲ್ಲಿ, ಹಬ್ಬ ಹರಿದಿನ, ಜಾತ್ರೆಗಳಂತಹ ಸಂದರ್ಭದಲ್ಲಿ ಫಾರಂ -04 ಹೆಸರಿನಲ್ಲಿ ರಿಯಾಯಿತಿ ನೀಡಿ, ಖಾಸಗಿ ಬಸ್ಸುಗಳ ದರಕ್ಕಿಂತ ಕಡಿಮೆ ನಿಗಧಿ ಮಾಡಿ, ಖಾಸಗಿ ಬಸ್ಸುಗಳ ಸಂಚಾರಕ್ಕೆ ಸಂಚಕಾರ ತಂದಿದ್ದಾರೆ. ಈ ಬಗ್ಗೆ ಹಲವು ಬಾರಿ ಅಕ್ಷೇಪ ವ್ಯಕ್ತಪಡಿಸಿ, ದೂರು ನೀಡಿದ್ದರೂ ಯಾವುದೇ ಕ್ರಮವಿಲ್ಲ.ಇದರ ಫಲವಾಗಿ ಕೋವಿಡ್ಗಿಂತ ಮೊದಲು ಇದ್ದ 430 ಬಸ್ಗಳ ಸಂಚಾರ ಮಾರ್ಗ 230ಕ್ಕೆ ಇಳಿದಿದೆ.ಕೆಲವು ಖಾಸಗಿ ಬಸ್ ಮಾಲೀಕರು ಅತ್ಯಂತ ಕಡಿಮೆ ದರಕ್ಕೆ ಬಸ್ ಓಡಿಸಲಾರದೆ ತಮ್ಮ ಪರವಾನಗಿಯನ್ನು ಹಿಂದಿರುಗಿಸಿದ ಪ್ರಸಂಗಗಳೂ ಇವೆ ಎಂದು ತಮ್ಮ ಅಳಲು ತೋಡಿಕೊಂಡರು.
ರಾಜ್ಯದಲ್ಲಿ ಹಳೆ ಮೈಸೂರು ಭಾಗದ 9 ಜಿಲ್ಲೆಗಳು ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳು ತಮ್ಮ ಕಾರ್ಯಾಚರಣೆ ನಡೆಸುತ್ತಿವೆ.2021 ರಲ್ಲಿ 78.94 ರೂ ಇದ್ದ ಡಿಸೇಲ್ ದರ ಈಗ 100 ರೂ ತಲುಪಿದೆ.ಕೆ.ಎಸ್.ಆರ್.ಟಿ.ಸಿ ಬಸ್ ದರ ಹೆಚ್ಚಳಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಕೆ.ಎಸ್.ಆರ್.ಟಿ.ಸಿ ಅವರು ಡಿಸೇಲ್ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿಯೇ ಬಸ್ ಟಿಕೇಟ್ ದರವನ್ನು ಹೆಚ್ಚಳ ಮಾಡುತ್ತಲೇ ಬಂದಿದ್ದಾರೆ. ಆದರೆ ಕಳೆದ ಐದು ವರ್ಷಗಳಿಂದ ನಾವು ಹೆಚ್ಚಳ ಮಾಡಿಲ್ಲ.ನಷ್ಟ ಅನುಭವಿಸಿದರೂ ಖಾಸಗಿ ಬಸ್ಗಳನ್ನೇ ನಂಬಿರುವ 6000 ಹೆಚ್ಚು ಜನರ ಡ್ರೈವರ್, ಕಂಡೆಕ್ಟರ್,ಎಜೆಂಟ್ಗಳ ಹೊಟ್ಟೆ ಪಾಡಿಗಾಗಿ ದರ ಹೆಚ್ಚಳ ಮಾಡಿಲ್ಲ.ದರ ಹೆಚ್ಚಳ ಅನಿವಾರ್ಯ ಮತ್ತು ಅವಶ್ಯಕ.ಹಾಗಾಗಿ ಪ್ರಾಯಾಣಿಕರ ಚೇಬಿಗೆ ಹೊರೆಯಾಗದಂತೆ ಬಸ್ ದರ ಹೆಚ್ಚಳ ಮಾಡಿದ್ದು, ಪ್ರಯಾಣಿಕರು ಸಹಕರಿಸುವಂತೆ ಬಿ.ಎಸ್.ಶಿವಕುಮಾರ್ ಮತ್ತು ಶಂಕರ್ ನಾರಾಯಣ್ ಮನವಿ ಮಾಡಿದರು.
ಖಾಸಗಿ ದರ ಹೆಚ್ಚಳಕ್ಕೂ ಮೊದಲು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಫೇಡರೇಷನ್ ಸಭೆ ನಡೆಸಿ, ಸಾಧಕ, ಭಾದಕಗಳನ್ನು ಚರ್ಚೆ ಮಾಡಿ, ವಾಹನಗಳ ಬಿಡಿ ಭಾಗಗಳ, ಡಿಸೇಲ್, ಇಂಜಿನ್ ಅಯಿಲ್, ಗ್ರೀಸ್ ಇವುಗಳ ಬೆಲೆ ಹೆಚ್ಚಳಕ್ಕೆ ಅನುಗುಣಮವಾಗಿ ಲಾಭವನ್ನು ಹೊರತು ಪಡಿಸಿ, ಟಿಕೇಟ್ ದರ ನಿಗಧಿ ಪಡಿಸಲು ತೀರ್ಮಾನಿಸಿದೆ.ಇದುವರೆಗೂ 20 ರೂ ಇದ್ದ ಟಿಕೇಟ್ ದರ 25 ರೂ ಆಗಲಿದೆ, 50 ರೂ ಇದ್ದ ಬೆಲೆ 60 ರೂ ಆಗಲಿದೆ, 100 ರೂ ಇದ್ದ ಬೆಲೆ 120 ರೂಗಳಾಗಲಿದೆ. ಅಂತಹ ದೊಡ್ಡ ಮೊತ್ತದ ಬೆಲೆ ಹೆಚ್ಚಳಕ್ಕೆ ಕೈಹಾಕದೆ, ಸಾರ್ವಜನಿಕರು, ಪ್ರಯಾಣಿಕರು, ವಾಹನಗಳ ಬಿಡಿ ಭಾಗಗಳು, ಡಿಸೇಲ್ ಬೆಲೆ ಹೆಚ್ಚಳ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಬೆಲೆಯನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.ಎಂದಿನಂತೆ ಗ್ರಾಹಕರು ಸಹಕರಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಬಿ.ಎಸ್.ಶಿವಕುಮಾರ್, ಕಾರ್ಯದರ್ಶಿ ಶಂಕರ್ ನಾರಾಯಣ್, ಉಪಾಧ್ಯಕ್ಷರಾದ ಮಂಜುನಾಥ್, ನಿರ್ದೇಶಕರುಗಳಾದ ಶರಣಪ್ಪ, ಎಂ.ಸಿ.ಲೀಲಾ ಮೂರ್ತಿ, ನಾರಾಯಣಪ್ಪ, ಜಯಣ್ಣ, ಬಾಲಕೃಷ್ಣ, ರುದ್ರಾರಾಧ್ಯ, ಸಲೀಂಪಾಷ, ವಸಂತಕುಮಾರ್, ಎಸ್.ಇ.ಟಿ. ಮಂಜುನಾಥ್, ಕೊಂಡರೆಡ್ಡಿ, ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)





