ತುಮಕೂರು: ಜಿಲ್ಲೆಯಲ್ಲಿ ೨೬೫ ಅಲ್ಪಸಂಖ್ಯಾತ ಅಂಗನವಾಡಿ ಕೇಂದ್ರಗಳಿದ್ದು, ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಉರ್ದು ಭಾಷೆ ಬಲ್ಲ ಕಾರ್ಯಕರ್ತೆಯರನ್ನು ನೇಮಕ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು. ೧ನೇ ತರಗತಿಗೆ ದಾಖಲಾದ ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣ ಮುಂದುವರೆಸಿ ೧೦ನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿರುವ ಬಗ್ಗೆ ನಿಗಾವಹಿಸಬೇಕು ಎಂದು ಡಿಡಿಪಿಐಗಳಾದ ಮನಮೋಹನ ಹಾಗೂ ಗಿರಿಜಮ್ಮ ಅವರಿಗೆ ನಿರ್ದೇಶನ ನೀಡಿದರು.
ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ೪ ಉರ್ದು ಪ್ರೌಢಶಾಲೆಗಳಲ್ಲಿ ೬೦ ವಿದ್ಯಾರ್ಥಿ ಹಾಗೂ ೮೯ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೧೪೯ ಅಲ್ಪಸಂಖ್ಯಾತ ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದಿದ್ದು, ಈ ಪೈಕಿ ೫೮ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣವನ್ನು ಮುಂದುವರೆಸಲು ಇಲಾಖೆಯಿಂದ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಒಟ್ಟು ೧೪೩ ಪ್ರಾಥಮಿಕ ಹಾಗೂ ೪ ಪ್ರೌಢಶಾಲೆ ಸೇರಿದಂತೆ ಒಟ್ಟು ೧೪೭ ಅಲ್ಪ ಸಂಖ್ಯಾತ ಶಾಲೆಗಳಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಡೆ ಶಾಲೆಗಳು ಹೆಚ್ಚಿನ ಗಮನ ಹರಿಸಬೇಕು. ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದಲ್ಲಿ ಮುಂಚೂಣಿಗೆ ಬರಬೇಕು. ಇದು ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ-ಗತಿಗಳನ್ನು ಸುಧಾರಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಬಾರಿ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಅವಲೋಕಿಸಿದಾಗ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು ಸುಧಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಿಂದುಳಿದ ವಿಷಯಗಳಲ್ಲಿ ವಿಶೇಷ ತರಗತಿ ನಡೆಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿ ಪರೀಕ್ಷೆ ಎದುರಿಸಲು ಸಹಾಯವಾಗುತ್ತದೆ ಎಂದು ಸೂಚಿಸಿದರು.
ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಯಿಂದ ಲಭ್ಯವಾದ ಮಾಹಿತಿಯನ್ವಯ ಜಿಲ್ಲೆಯಲ್ಲಿರುವ ಸರ್ಕಾರಿ ಐಟಿಐ, ಪದವಿ ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ಕೌಶಲ್ಯ ತರಬೇತಿಯನ್ನು ಕ್ರಮಬದ್ಧವಾಗಿ ನಡೆಸಬೇಕು ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ ಮಾತನಾಡಿ, ಕೌಶಲ್ಯ ತರಬೇತಿಯ ಪರಿಣಾಮವಾಗಿ ಈಗಾಗಲೇ ೪೮೪ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮುಂದುವರೆದು ಮಾತನಾಡಿದ ನಿಸಾರ್ ಅಹಮದ್ ಅಲ್ಪಸಂಖ್ಯಾತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ವಿದ್ಯಾರ್ಥಿವೇತನ ಯೋಜನೆಗಳನ್ನು ಘೋಷಿಸಿವೆ. ಅಲ್ಪಸಂಖ್ಯಾತರಿಗೆ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿಯಿಲ್ಲದಿರುವುದು ಬೇಸರ ತಂದಿದೆ. ಕೇಂದ್ರದ ಮೌಲನಾ ಆಜಾದ್ ಶಿಕ್ಷಣ ನಿಧಿ ಯೋಜನೆ, ಪ್ರೀ-ಮ್ಯಾಟ್ರಿಕ್ ಮತ್ತು ಪೋಸ್ಟ್-ಮ್ಯಾಟ್ರಿಕ್ ವಿದ್ಯಾರ್ಥಿವೇತನ ಯೋಜನೆಗಳು ಹಾಗೂ ವಸತಿಗೃಹ ಸೌಲಭ್ಯಗಳ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ಇದರಿಂದ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಲು ಅನುವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಅಂಬೇಡ್ಕರ್ ಕಾರ್ಮಿಕ ಹಸ್ತ ಯೋಜನೆ ಹಾಗೂ ಇ-ಶ್ರಮ್ ಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಅಲ್ಪಸಂಖ್ಯಾತ ಸಮುದಾಯಗಳ ಅಸಂಘಟಿತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ವಿಶೇಷವಾಗಿ ಚಾಲಕರು, ಟೈಲರ್ ಮತ್ತು ಬೀದಿಬದಿ ವ್ಯಾಪಾರಸ್ಥರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಅರಿವು ಮೂಡಿಸಬೇಕು. ಅಭಿಯಾನದ ಮೂಲಕ ಕಾರ್ಮಿಕರು ಸಾಮಾಜಿಕ ಭದ್ರತೆ ಯೋಜನೆಗಳ ಲಾಭ ಪಡೆಯುವ ಅವಕಾಶ ಕಲ್ಪಿಸುವುದು ಈ ಅಭಿಯಾನದ ಉದ್ದೇಶವಾಗಿದ್ದು, ಅಧಿಕಾರಿಗಳು ಅಸಂಘಟಿತ ಕಾರ್ಮಿಕರನ್ನು ಪತ್ತೆ ಹಚ್ಚಿ ನೋಂದಣಿ ಪ್ರಮಾಣವನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಆಪ್ತ ಸಹಾಯಕ ಮುಜೀಬುಲ್ಲ ಜûಫಾರಿ, ಪ್ರಧಾನ ಮಂತ್ರಿ ೧೫ ಅಂಶಗಳ ಕಾರ್ಯಕ್ರಮದ ಸದಸ್ಯ ಮಹಮ್ಮದ್ ಕಲೀಂ ಉಲ್ಲಾ, ಜೆಫಿನ್ ಜಾಯ್, ಜೆ.ಪಿ. ಉಮೇಶ್ ಕುಮಾರ್, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಬ್ಬೀರ್ ಅಹ್ಮದ್ ಹಾಗೂ ಅಲ್ಪಸಂಖ್ಯಾತ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)