ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ಹಾಗಲವಾಡಿ ಗ್ರಾಮದ ಶ್ರೀ ಕರಿಯಮ್ಮ ದೇವರ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ೩ ವರ್ಷ(೨೦೨೫-೨೦೨೮)ಗಳ ಅವಧಿಗಾಗಿ ಚುನಾವಣೆ ನಡೆಸಲು ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಗುಬ್ಬಿ ತಹಶೀಲ್ದಾರ್ ಬಿ.ಆರತಿ ತಿಳಿಸಿದ್ದಾರೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ದೇವಾಲಯದ ಸಮಿತಿ ಚುನಾವಣೆ ನಡೆಸಲು ಆ
ದೇಶಿಸಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ನಡೆಸಲಾಗುತ್ತಿದೆ. ಚುನಾವಣೆ ಸಂಬ0ಧ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಪ್ರಕಟಿಸಲಾಗಿರುವ ವೇಳಾಪಟ್ಟಿಯನ್ವಯ ಸೆಪ್ಟೆಂಬರ್ ೧೫ರಂದು ೨೦೧೭ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ತಯಾರಿಸಲಾಗಿದ್ದ ಮೂಲ ಮತದಾರರ ಪಟ್ಟಿಯನ್ನು ಗುಬ್ಬಿ ತಾಲ್ಲೂಕು ಕಚೇರಿ, ಹಾಗಲವಾಡಿ ನಾಡಕಚೇರಿ ಹಾಗೂ ಶ್ರೀ ಕರಿಯಮ್ಮ ದೇವರ ದೇವಾಲಯದಲ್ಲಿ ಪ್ರಕಟಿಸಲಾಗುವುದು.
ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಮರಣ/ಮತ್ತಿತರ ಕಾರಣಗಳಿಂದ ಹೆಸರನ್ನು ಕೈಬಿಡುವ ಸಂಬ0ಧ ಸೆಪ್ಟೆಂಬರ್ ೧೫ ರಿಂದ ೨೦ರವರೆಗೆ ಬೆಳಿಗ್ಗೆ ೧೧ ರಿಂದ ೪ ಗಂಟೆಯೊಳಗಾಗಿ ಖುದ್ದು ಹಾಜರಾಗಿ ನಾಡಕಚೇರಿಯಲ್ಲಿರುವ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿದೆ.
ಕರಡು ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ ೨೬ರಂದು ಪ್ರಕಟಿಸಲಾಗುವುದು. ಮತದಾರರ ಪಟ್ಟಿಗೆ ಸಂಬ0ಧಿಸಿದ0ತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸೆಪ್ಟೆಂಬರ್ ೨೯ ಹಾಗೂ ೩೦ರಂದು ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ ೧೦ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸುವವರು ಹಾಗಲವಾಡಿ ಶ್ರೀ ಕರಿಯಮ್ಮ ದೇವರ ಭಕ್ತರಾಗಿರಬೇಕು. ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು ಹಾಗೂ ದಿನಾಂಕ ೧೧-೯-೨೦೨೫ಕ್ಕೆ ೧೮ ವರ್ಷ ತುಂಬಿದವರಾಗಿರಬೇಕು. ಕ್ರಿಮಿನಲ್ ಅಪರಾಧಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರಬಾರದು. ಮಾನಸಿಕ ಅಸ್ವಸ್ಥತೆ ಹೊಂದಿದವರಾಗಿರಬಾರದು. ಈಗಾಗಲೇ ಸೇರ್ಪಡೆಯಾಗಿರುವ ಮತದಾರರನ್ನು ಹೊರತುಪಡಿಸಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಬಯಸುವ ವ್ಯಕ್ತಿಗಳು ೧೦ ರೂ.ಗಳ ನಿಗದಿತ ಶುಲ್ಕ ಪಾವತಿಸಿ ಇತ್ತೀಚಿನ ೨ ಭಾವಚಿತ್ರಗಳೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.
ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮತ್ತು ಕೈಬಿಡಲು ನಿಗದಿತ ಅರ್ಜಿ ನಮೂನೆಯನ್ನು ಹಾಗಲವಾಡಿ ನಾಡ ಕಚೇರಿಯಲ್ಲಿ ೨ರೂ.ಗಳ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡನ್ನು ಲಗತ್ತಿಸಿ ಸಲ್ಲಿಸಬಹುದಾಗಿದೆ.
ಒಬ್ಬ ವ್ಯಕ್ತಿ ಕೇವಲ ಅವರ ಹಾಗೂ ಕುಟುಂಬಸ್ಥರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡನ್ನು ಲಗತ್ತಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರನ್ನು ಕೈಬಿಡುವ ಸಂಬ0ಧ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಮರಣ ಪ್ರಮಾಣ ಪತ್ರವನ್ನು ಲಗತ್ತಿಸಬೇಕು ಎಂದು ಅವರು ತಿಳಿಸಿದ್ದಾರೆ.

(Visited 1 times, 1 visits today)