ತುಮಕೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಹು ದಿನಗಳಿಂದ ಖಾಲಿಯಿರುವ ಪೌರ ಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡದ ಅಧಿಕಾರಿಗಳನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ತುಮಕೂರಿನಲ್ಲಿ ಸೋಮವಾರ ನಡೆಯಿತು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ನಿಗಮ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರಪಾಲಿಕೆ ಸಹಯೋಗದಲ್ಲಿ ಸೋಮವಾರ ತುಮಕೂರು ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷ ಪಿ. ರಘು ಅವರು ನಗರಸಭೆ, ಪುರಸಭೆ ಸೇರಿದಂತೆ ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದಾಗ್ಯೂ ಈವರೆಗೆ ಪೌರ ಕಾರ್ಮಿಕರ ಹುದ್ದೆ ಭರ್ತಿಗೆ ಮುಂದಾಗದ ಅಧಿಕಾರಿಗಳ ವರ್ತನೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಸರ್ಕಾರದ ಆದೇಶ ಪೌರ ಕಾರ್ಮಿಕರ ಬಳಿಯಿದೆ. ಆದರೆ ಸಂಬ0ಧಿಸಿದ ನಗರ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳ ವಿಳಂಬಧೋರಣೆ ಅಥವಾ ನಿರ್ಲಕ್ಷö್ಯದಿಂದ ಈವರೆಗೆ ಆದೇಶವನ್ನು ಪಾಲಿಸದೆ ಅಧಿಕಾರಿಗಳು ವಿಳಂಬಧೋರಣೆ ತೋರುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ಶಿರಾ ಪುರಸಭೆಯ ಮುಖ್ಯಾಧಿಕಾರಿ ರುದ್ರೇಶ್ ಅವರಿಗೆ ನೋಟೀಸ್ ಜಾರಿಗೊಳಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಬೇಕು. ಈ ಸಂಬ0ಧ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷರು ಸೂಚಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು ಮನೆ/ನಿವೇಶನ ದೊರಕಿಸಿಕೊಡುವಂತೆ ಕೋರಿಕೆ ಇಟ್ಟ ಹಿನ್ನೆಲೆಯಲ್ಲಿ ಸಂಬ0ಧಿಸಿದ ಅಧಿಕಾರಿಗಳು ಈ ಕೂಡಲೇ ಪೌರ ಕಾರ್ಮಿಕರಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯವನ್ನು ವಿತರಿಸಲು ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಪೌರ ಕಾರ್ಮಿಕರ ಜಾಗೃತ ಸಮಿತಿ ಸದಸ್ಯರಾದ ಓಬಳೇಶ್ ಅವರು ತುಮಕೂರು ಜಿಲ್ಲೆಯಲ್ಲಿ ೨೦೦೨ರಲ್ಲಿ ೧೫೭ ಕುಟುಂಬಗಳನ್ನು ಸಫಾಯಿ ಕರ್ಮಚಾರಿ ಕುಟುಂಬಗಳು ಎಂದು ಗುರುತಿಸಲಾಗಿದೆ. ಆದರೆ ಅವರ ಪುನರ್ವಸತಿ ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಾಗಿಲ್ಲ, ಕೇವಲ ೨ ಕುಟುಂಬಗಳಿಗೆ ಸಾರಥಿ ಯೋಜನೆಯಡಿ ೨ ವಾಹನಗಳು ಹಾಗೂ ೭ ಕುಟುಂಬಗಳಿಗೆ ಸಾಲ ಸೌಲಭ್ಯ ಮಂಜೂರಾತಿಯಾಗಿದೆ. ಆದರೆ ಜಿಲ್ಲಾ ಜಾಗೃತಿ ಸಮಿತಿ ಸಭೆ ನಡೆಯದೆ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿರುವುದಿಲ್ಲ ಎಂದರು.
ಅಲ್ಲದೆ, ತುಮಕೂರು ಮಹಾನಗರಪಾಲಿಕೆ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಲು ೧೭ ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಆದರೂ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆದಿಲ್ಲ ಎಂದು ತಿಳಿಸಿದರು.
ಈ ಸಂಬ0ಧ ಸಭೆಯಲ್ಲಿದ್ದ ತುಮಕೂರು ಮಹಾನಗರಪಾಲಿಕೆ ಆಯುಕ್ತೆ ಶುಭ ಅವರಿಗೆ ಸೂಚನೆ ನೀಡಿ ಪೌರ ಕಾರ್ಮಿಕರ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬ0ಧ ಕ್ರಮವಹಿಸುವಂತೆ ಆಯೋಗದ ಅಧ್ಯಕ್ಷರು ಸೂಚಿಸಿದರು.
ನಗರ ಹಾಗೂ ಗ್ರಾಮ ಪಂಚಾಯತಿ ಇನ್ನಿತರ ಕಡೆಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರು ಹಾಗೂ ಸ್ವಚ್ಛತಾಗಾರರಿಗೆ ಇಡೀ ಸಮಾಜ ಋಣಿಯಾಗಿರಬೇಕು, ಈ ಸಮುದಾಯದ ಸುಧಾರಣೆಗೆ ನಿಯಮಾನುಸಾರ ಸಿಗಬೇಕಿರುವ ಸೌಲಭ್ಯಗಳನ್ನು ವಿತರಿಸಲು ಸಂಬ0ಧಿಸಿದ ಆಡಳಿತ ಕ್ರಮವಹಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ. ಸಂಜೀವಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಯೋಗಾನಂದ ಹಾಗೂ ತುಮಕೂರು ಮಹಾನಗರಪಾಲಿಕೆಯ ಆಯುಕ್ತೆ ಶುಭ ಉಪಸ್ಥಿತರಿದ್ದರು.
ಸಂವಾದದಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು, ಪಂಚಾಯತಿ ವ್ಯಾಪ್ತಿಯ ಸ್ವಚ್ಛತಾಗಾರರು, ಸಂಬ0ಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು.

 

 

(Visited 1 times, 1 visits today)