
ತುಮಕೂರು: ಆರ್ಥಿಕ ಸಬಲೀಕರಣದ ಮೂಲಕ ವಿಕಲಚೇತನರು ಸ್ವಾವಲಂಬಿಗಳಾಗಿ ಬಾಳಲು ಅವಕಾಶ ಕಲ್ಪಿಸಬೇಕು. ವಿಕಲಚೇತನರಿಗೆ ಜಾತಿಬೇಧವಿಲ್ಲ, ರಾಜ್ಯದಲ್ಲಿ ಸುಮಾರು ೧೨ ಲಕ್ಷಕ್ಕೂ ಅಧಿಕ ವಿಕಲಚೇತನರಿದ್ದಾರೆ. ಇವೆಲ್ಲರು ಆರ್ಥಿಕ ಚಟುವಟಿಕೆ ನಡೆಸಲು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಈ ಬಗ್ಗೆ ಶಾಸಕರುಗಳ ಮೂಲಕ ಸರ್ಕಾರದ ಮೇಲೆ ಒತ್ತಡ ತರುವಂತೆ ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಲಹೆ ಮಾಡಿದರು.
ತಿಪಟೂರು ಕಾರ್ಯಕ್ರಮ ಮುಗಿಸಿ ಭಾನುವಾರ ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಗಂಗರಾಜು ಅವರ ತುಮಕೂರಿನ ರಿಂಗ್ ರಸ್ತೆಯಲ್ಲಿರುವ ನಿವಾಸದಲ್ಲಿ ಸೇರಿದ್ದ ವಿಕಲಚೇತನರ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ವಿಕಲಚೇತನರಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಿ ಅವರು ಸ್ವಾಭಿಮಾನದಿಂದ ಬಾಳುವಂತಹ ಅವಕಾಶ ಕಲ್ಪಿಸಬೇಕು ಎಂಬುದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕಳಕಳಿ. ತಮ್ಮ ಅಧಿಕಾರವಧಿಯಲ್ಲಿ ಸುಮಾರು ಆರು ಲಕ್ಷ ವಿಕಲಚೇತನರಿಗೆ ವಿವಿಧ ರೀತಿಯ ಉದ್ಯೋಗ ಕಲ್ಪಿಸಲು ಕಾರಣರಾದರು. ಇವತ್ತಿಗೂ ವಿಕಲಚೇತನರ ಸಮಸ್ಯೆಗಳಿಗೆ ಕಾಳಜಿಯಿಂದ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ವಿಕಲಚೇತನರು ಯಾರಿಗೂ ಹೊರೆಯಾಗಬಾರದು, ತಾವೇ ದುಡಿದು ಸ್ವಾಭಿಮಾನದಿಂದ ಬಾಳಬೇಕು. ಅವರ ಸ್ವಾಲವಂಬಿ ಬದುಕಿಗೆ ನೆರವಾಗಲು ಸರ್ಕಾರ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಬೇಕು. ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅನುದಾನ ನೀಡಿ ವಿಕಲಚೇತನರು ಆರ್ಥಿಕ ಚಟುವಟಿಕೆ ನಡೆಸಲು ಸರ್ಕಾರ ಆಸಕ್ತಿ ತೋರಬೇಕು. ಈ ಬಗ್ಗೆ ಶಾಸಕರುಗಳ ಮೂಲಕ ಸರ್ಕಾರಕ್ಕೆ ಒತ್ತಾಯ ತರುವಂತೆ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ವಿಕಲಚೇತನರಿಗೆ ರಾಜಕೀಯದಲ್ಲೂ ಅವಕಾಶ ಕಲ್ಪಿಸಲು ರಾಜಕೀಯ ಮೀಸಲಾತಿ ತರುವಂತೆ ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಲು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕೋರುವಂತೆ ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಗಂಗರಾಜು ಈ ವೇಳೆ ಮನವಿ ಮಾಡಿದರು.
ಸಂವಿಧಾನದಲ್ಲಿ ಎಲ್ಲರಿಗೂ ರಾಜಕೀಯ ಪ್ರಾತಿನಿಧ್ಯದ ಅವಕಾಶವಿದೆ. ವಿಕಲಚೇತನರಿಗೆ ರಾಜಕೀಯ ಸ್ಥಾನಮಾನದ ಮೀಸಲಾತಿಯ ಜಾರಿ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತಾವು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಗಮನಕ್ಕೆ ತರುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಈಗ ೫೬,೪೩೨ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಆದರೆ ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ನೇಮಕಾತಿಯಲ್ಲಿ ಪರಿಗಣಿಸುತ್ತಿಲ್ಲ, ಇದರಿಂದ ಪರಿಶಿಷ್ಟ ಜಾತಿಯ ಬಹುಸಂಖ್ಯಾತ ಮಾದಿಗ ಸಮುದಾಯದ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗುತ್ತದೆ. ಅನ್ಯಾಯ ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಗಂಗರಾಜು ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್.ನಿಂಗಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಉಪಾಧ್ಯಕ್ಷ ಡಾ.ಮುಕುಂದ್, ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಯ್ಯ, ಮುಖಂಡರಾದ ವೈ.ಕೆ.ಬಾಲಕೃಷ್ಣಪ್ಪ, ಹೊಳಕಲ್ಲು ಆಂಜನಪ್ಪ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಣ್ಣ, ನಗರಪಾಲಿಕೆ ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಹೆಚ್‌ಡಿಕೆ ಮಂಜುನಾಥ್, ಗೂಳೂರು ನವೀನ್ ಸೇರಿದಂತೆ ಹಲವು ವಿಕಲಚೇತನರು ಭಾಗವಹಿಸಿದ್ದರು.



