ಹುಳಿಯಾರು: ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಅತ್ಯಗತ್ಯ ಎಂದು ಗೀತಕ್ಕ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿಸ್ ಈಶ್ವರೀಯ ವಿಶ್ವವಿದ್ಯಾ ಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ಹುಳಿಯಾರು-ಕೆಂಕೆರೆ ಶಾಖೆ ಹಮ್ಮಿಕೊಂಡಿದ್ದ ೪೮ ದಿನಗಳ “ಉಚಿತ ಯೋಗಾಸನ ಹಾಗೂ ಪ್ರಾಣಾಯಾಮ ತರಬೇತಿ ಶಿಬಿರ”ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ನಟರಾಜು ಅವರು, “ಯೋಗವು ಕೇವಲ ವ್ಯಾಯಾಮವಲ್ಲ, ಅದು ಜೀವನ ನಡೆಸುವ ಕಲೆ. ರೋಗಮುಕ್ತ ಸಮಾಜ ನಿರ್ಮಾಣಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ ೪೮ ದಿನಗಳ ಕಾಲ ಸೂರ್ಯ ನಮಸ್ಕಾರ, ಆಸನಗಳು, ಮುದ್ರೆಗಳು ಹಾಗೂ ಪ್ರಾಣಾಯಾಮದ ಬಗ್ಗೆ ಸವಿಸ್ತಾರವಾಗಿ ಕಲಿಸಲಾಗುವುದು,” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಯೋಗ ಶಿಕ್ಷಕಿ ಬಕುಳಾದೇವಿ ಅವರು ಮಾತನಾಡಿ, ದಿನನಿತ್ಯದ ಜಂಜಾಟಗಳ ನಡುವೆ ಯೋಗ ಮಾಡುವುದರಿಂದ ಏಕಾಗ್ರತೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಬಸವರಾಜ್ ಅವರು ನಿರೂಪಣೆ ಮಾಡಿದರು. ಯೋಗ ಶಿಕ್ಷಕ ಹೆಚ್.ಡಿ.ದುರ್ಗರಾಜು ಅವರು ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಮಲ್ಲಿಕಾರ್ಜುನ, ಚನ್ನಬಸಪ್ಪ, ರಂಗನಾಥ್, ಪ್ರಮಿಳಾ, ಲಾವಣ್ಯ, ದಾಕ್ಷಾಯಣಿ, ಪ್ರೇಮಲೀಲ, ಪಾರ್ವತಮ್ಮ, ಪಂಡಿತ್ ಬಸವರಾಜು, ವಿಜಯಕುಮಾರಿ, ದೇವರಾಜು ಹಾಗೂ ಗಂಗಾಧರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಿವಪ್ರಕಾಶ್ ಅವರು ವಂದನಾರ್ಪಣೆ ಮಾಡಿದರು. ಶಿಬಿರದಲ್ಲಿ ನೂರಾರು ಯೋಗಾಸನ ಪ್ರೇಮಿಗಳು ಪಾಲ್ಗೊಂಡು ಉತ್ಸಾಹದಿಂದ ಯೋಗಾಭ್ಯಾಸ ಆರಂಭಿಸಿದರು.

(Visited 1 times, 1 visits today)