
ತುಮಕೂರು: ಜೀವನದಲ್ಲಿ ಎದುರಾಗುವ ಕಷ್ಟ-ಸುಖ ಹಾಗೂ ನೋವು-ನಲಿವುಗಳು ಸಹಜ ಪ್ರಕ್ರಿಯೆಗಳಾಗಿದ್ದು, ಇವು ಯಾವುದೂ ಮನುಷ್ಯನ ಸಾಧನೆಯ ಹಾದಿಗೆ ಅಡ್ಡಿ ಯಾಗಬಾರದು ಎಂದು ಮಹಿಳಾ ಅಂಧರ ಟಿ-೨೦ ವಿಶ್ವಕಪ್ ವಿಜೇತ ತಂಡದ ನಾಯಕಿ ಟಿ. ಸಿ. ದೀಪಿಕಾ ಅವರು ಕಿವಿಮಾತು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಯೋಗಾಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ (ಮಾ. ೨೭) ಶುಕ್ರವಾರ ಆಯೋಜಿಸಲಾಗಿದ್ದ ಯೋಗ ಮತ್ತು ಮಹಿಳಾ ಸಬಲೀಕರಣ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಜೀವನದ ಕಹಿ ಘಟನೆಗಳನ್ನು ಮೆಲುಕು ಹಾಕಿದ ಅವರು, ಒಂದು ಹೊತ್ತಿನ ಊಟಕ್ಕೂ ಪರದಾಡಿದ ದಿನಗಳು ಮತ್ತು ಅಂಧತ್ವದ ಕಾರಣಕ್ಕೆ ಎದುರಿಸಿದ ಅವಹೇಳನಗಳನ್ನು ಸ್ಮರಿಸಿದರು. ಟೀಕೆಗಳನ್ನು ಮೆಟ್ಟಿ ನಿಂತು ಸಾಧನೆಯ ಗುರಿ ತಲುಪುವ ಮೂಲಕ ಇಂದು ತನ್ನನ್ನು ಹೀಯಾಳಿಸಿದವರು ತಲೆತಗ್ಗಿಸುವಂತೆ ಹಾಗೂ ಬೆಂಬಲಿಸಿದವರು ಹೆಮ್ಮೆಯಿಂದ ತಲೆ ಎತ್ತುವಂತೆ ಮಾಡಿರುವುದಾಗಿ ತಿಳಿಸಿದರು.
ಬೆಂಗಳೂರಿನ ಅಂತರಾಷ್ಟ್ರೀಯ ಯೋಗ ಮತ್ತು ವೆಲ್ನೇಸ್ ತರಬೇತುದಾರರಾದ ನಂದಿನಿ ಎಸ್. ಪಿ. ಅವರು ಮಾತನಾಡಿ ಯೋಗವು ಕೇವಲ ಒಂದು ಸ್ಪರ್ಧೆಯಲ್ಲ ಅಥವಾ ಫ್ಯಾಷನ್ ಅಲ್ಲ, ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಮಾನಸಿಕ ಸ್ಥಿರತೆ, ಏಕಾಗ್ರತೆ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಯೋಗ ಪೂರಕವಾಗಿದೆ. ಆಧುನಿಕ ಔಷಧಿಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ ಆರೋಗ್ಯ ಸುಧಾರಿಸುವ ಶಕ್ತಿ ಯೋಗಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ತುಮಕೂರು ವಿಶ್ವವಿದ್ಯಾನಿ ಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅವರು ಮಾತನಾಡಿ, ಸಾಧಕಿಯರ ಬದುಕು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ. ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಉನ್ನತ ಮಟ್ಟಕ್ಕೇರಲು ಸಾಧ್ಯ. ದೇಶದ ಅಭಿವೃದ್ಧಿಯಲ್ಲಿ ಯುವ ಸಮೂಹದ, ಅದರಲ್ಲೂ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ದೈಹಿಕ ಸದೃಢತೆಯು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದ್ದು, ಇದರಿಂದ ಉತ್ತಮ ಚಿಂತನೆಗಳು ಮೂಡುತ್ತವೆ ಎಂದರು.
ವೇದಿಕೆಯಲ್ಲಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ್, ಸಂಚಾಲಕರಾದ ಡಾ. ಚೇತನ್ ಪ್ರತಾಪ್ ಕೆ. ಎನ್.,ಡಾ.. ಮಂಗಳಗೌರಿ, ಡಾ. ಅನಿತಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



