ಹುಳಿಯಾರು: ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಿಲ್ಲದೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಬೆಸ್ಕಾಂ ವತಿಯಿಂದ ಹುಳಿಯಾರು ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ೧೧ ಕೆ.ವಿ ಮಾರ್ಗಗಳ ಸಮಗ್ರ ತುರ್ತು ನಿರ್ವಹಣಾ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ಆರಂಭವಾದ ಈ ವಿಶೇಷ ಅಭಿಯಾನದಲ್ಲಿ ಇಡೀ ಸಿಬ್ಬಂದಿ ವರ್ಗವು ವಿವಿಧ ತಂಡಗಳಾಗಿ ಹಂಚಿಹೋಗಿ ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಿತು. ಮುಖ್ಯವಾಗಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಹಾಗೂ ಗಾಳಿ-ಮಳೆಗೆ ಮುರಿದು ಬೀಳುವ ಸ್ಥಿತಿಯಲ್ಲಿದ್ದ ಮರದ ಕೊಂಬೆಗಳನ್ನು ಮತ್ತು ಲೈನ್‌ಗಳಿಗೆ ಅಡ್ಡಲಾಗಿದ್ದ ಬೇಲಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.
ಮಾರ್ಗ ಮಧ್ಯೆ ಸಡಿಲಗೊಂಡಿದ್ದ ವಿದ್ಯುತ್ ತಂತಿಗಳ ಬಿಗಿಗೊಳಿಸುವಿಕೆ ಹಾಗೂ ಇನ್ಸುಲೇಟರ್‌ಗಳ ತಪಾಸಣೆ ನಡೆಸಲಾಯಿತು. ಭವಿಷ್ಯದಲ್ಲಿ ಉಂಟಾಗಬಹುದಾದ ದೊಡ್ಡ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ, ವಿವಿಧೆಡೆ ಬಾಗಿದ್ದ ವಿದ್ಯುತ್ ಕಂಬಗಳನ್ನು ಜೆಸಿಬಿ ಹಾಗೂ ಸಿಬ್ಬಂದಿಗಳ ಸಹಾಯದಿಂದ ಯಶಸ್ವಿಯಾಗಿ ನೇರಗೊಳಿಸಲಾಯಿತು.
ಈ ಇಡೀ ಕಾರ್ಯಾಚರಣೆಯ ನೇತೃತ್ವವನ್ನು ಹುಳಿಯಾರು ಬೆಸ್ಕಾಂ ಶಾಖಾಧಿಕಾರಿಗಳಾದ ರಘುರಾಮ್ ಮತ್ತು ಹನುಮಂತರಾಯಪ್ಪ ಅವರು ವಹಿಸಿಕೊಂಡಿದ್ದರು. ಸ್ಥಳದಲ್ಲೇ ಮೊಕ್ಕಾಂ ಹೂಡಿ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿದ ಅಧಿಕಾರಿಗಳು, ಯಾವುದೇ ತಾಂತ್ರಿಕ ಅಡಚಣೆ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರು.
ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಹುಳಿಯಾರು ಶಾಖೆ ೧ ಮತ್ತು ೨ ರ ಎಲ್ಲಾ ಲೈನ್‌ಮನ್‌ಗಳು, ಸಹಾಯಕ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗದ ಕಾರ್ಯದಕ್ಷತೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

(Visited 1 times, 1 visits today)