
ಹುಳಿಯಾರು: “ದೇಶಕ್ಕೆ ಇಂದು ಮತ್ತೊಂದು ಹಿಂದೂ-ಮುಸ್ಲಿA ವಿವಾದದ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಶಿಕ್ಷಣ, ಅಭಿವೃದ್ಧಿ ಮತ್ತು ಸಾಮಾಜಿಕ ಶಾಂತಿ,” ಎಂದು ಹುಳಿಯಾರಿನ ಜಾಮೀಯ ಮಸೀದಿ ಕಾರ್ಯದರ್ಶಿ ನದೀಮ್ ಅವರು ಕರೆ ನೀಡಿದರು.
ಹುಳಿಯಾರಿನ ಜಾಮೀಯ ಮಸೀದಿ ಹಾಗೂ ಸುತ್ತಮುತ್ತಲಿನ ವಿವಿಧ ಮಸೀದಿ ಸಮಿತಿಗಳ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶಾಂತಿಯುತ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಲ್ಲದೆ, ಸಾಮಾನ್ಯ ಭಾರತೀಯನಾಗಿ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿಯಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಗೋವು ರಾಜಕೀಯ ವಸ್ತುವಾಗದಿರಲಿ: ಭಾರತೀಯ ಸಂಸ್ಕöÈತಿ, ಗ್ರಾಮೀಣ ಪ್ರದೇಶ ಮತ್ತು ರೈತರ ಬದುಕಿನಲ್ಲಿ ಗೋವು ಅತ್ಯಂತ ಪ್ರಮುಖ ಪ್ರಾಣಿಯಾಗಿದೆ. ಗೋವಿನ ಕುರಿತು ಪರಸ್ಪರ ಗೌರವದಿಂದ ಚರ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗೋವು ರಾಜಕೀಯ ವಸ್ತುವಾಗಬಾರದು, ಅದು ಸಮಾಜದಲ್ಲಿ ಪರಸ್ಪರ ಗೌರವದ ವಿಷಯವಾಗಬೇಕು. ಸಮಾಜ ಒಗ್ಗಟ್ಟಾಗಬೇಕಾದರೆ ಪರಸ್ಪರ ಗೌರವ ಅಗತ್ಯ. ಆಗ ಮಾತ್ರ ದೇಶ ಪ್ರಬಲವಾಗಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಏಕತೆಗೆ ನಮ್ಮ ಬದ್ಧತೆ: “ದೇಶದಲ್ಲಿ ಯಾವುದೇ ಧರ್ಮದ ವಿವಾದ ಉಂಟಾದರೆ ಇಡೀ ದೇಶದ ಗಮನ ಅತ್ತ ಹರಿಯುತ್ತದೆ. ಇದರಿಂದ ಬಡವರ ಕಷ್ಟ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಬಡವನ ಹಸಿವು ಕಡೆಗಣನೆಗೆ ಒಳಗಾಗುತ್ತದೆ. ನಾವು ಯಾವುದೇ ರಾಜಕೀಯ ದ್ವೇಷಕ್ಕೆ ಬಲಿಯಾಗುವುದಿಲ್ಲ ಹಾಗೂ ಬೇರೆ ಧರ್ಮದ ಭಾವನೆಗಳಿಗೆ ಧಕ್ಕೆಯಾಗುವುದನ್ನು ಸಹಿಸುವುದಿಲ್ಲ. ನಾವು ದೇಶದ ಏಕತೆಯ ಪರವಾಗಿದ್ದೇವೆ,” ಎಂದು ಸಮುದಾಯದ ಮುಖಂಡರು ಒಕ್ಕೊರಲಿನಿಂದ ತಿಳಿಸಿದರು.
ಪ್ರಮುಖ ಬೇಡಿಕೆಗಳು: ಇದೇ ಸಂದರ್ಭದಲ್ಲಿ ಗೋವನ್ನು ರಾಷ್ಟಿçÃಯ ಪ್ರಾಣಿಯನ್ನಾಗಿ ಘೋಷಿಸಬೇಕು, ಗೋವಿನ ರಕ್ಷಣೆಗೆ ಮತ್ತು ಗೋ ರಫ್ತನ್ನು ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮದ್ಯಪಾನಕ್ಕೆ ಪರವಾನಗಿ ನೀಡುವ ಮಾನದಂಡಗಳನ್ನು ಇಂದು ಕಡೆಗಣಿಸಲಾಗುತ್ತಿದ್ದು ಯಾರಿಗೆ ಬೇಕಾದರೂ ಸುಲಭವಾಗಿ ಪರವಾನಗಿ ನೀಡಲಾಗುತ್ತಿದ್ದು, ಇದನ್ನು ತಡೆದು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮುಸ್ಲಿಂ ಸಮುದಾಯದ ವತಿಯಿಂದ ತಹಶೀಲ್ದಾರರ ಮುಖಾಂತರ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ದೇಶದ ಪ್ರಧಾನಮಂತ್ರಿಯವರಿಗೆ ಪ್ರಮುಖ ಬೇಡಿಕೆಗಳನ್ನೊಳಗೊಂಡ ಸಂದೇಶವನ್ನು ರವಾನಿಸಲಾಯಿತು.
ಈ ಶಾಂತಿಯುತ ಪ್ರತಿಭಟನೆಯಲ್ಲಿ ಹುಳಿಯಾರು ಜಾಮಿಯಾ ಮಸೀದಿ ಮುತುವಲ್ಲಿ ಆರೀಫ್, ಉಪಾಧ್ಯಕ್ಷ ಸಾದತ್ ಷರೀಪ್, ವೈ.ಎಸ್.ಪಾಳ್ಯ ರಿಯಾಜ್, ಹಾರೂನ್, ನಜೀರ್, ಶಫಿ, ಸುನ್ನು, ಗೌಸ್, ಖದೀರ್, ಇಮ್ರಾನ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಮುದಾಯದ ಅನೇಕ ಪ್ರಮುಖರು ಉಪಸ್ಥಿತರಿದ್ದರು.


