ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಬಿ ಜಿ ರಾಮ್ ಜಿ ಯೋಜನೆಯು ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ಗುರಿ ಆಧಾರಿತ ಕಾರ್ಯಕ್ರಮವಲ್ಲ. ಹಾಗಾಗಿ ಸಮಗ್ರ ಕಾರ್ಯವಿಧಾನ ಸಂಹಿತೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಮಾರ್ಗಸೂಚಿಗಳು, ಮಾದರಿ ಅಂದಾಜುಗಳು ಮತ್ತು ಜವಾಬ್ದಾರಿ ನಕ್ಷೆಯನ್ನು ಪ್ರಕಟಿಸುವವರೆಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಮಾನವ ದಿನಗಳ ಗುರಿ ನಿಗದಿ ಹಾಗೂ ಅನಗತ್ಯ ಒತ್ತಡ ವಿಧಿಸಬಾರದು ಎಂದು ಆಗ್ರಹಿಸಿ ರಾಜ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಸುಬ್ಬರಾಜ ಅರಸ್ ವಿ.ಆರ್. ನೇತೃತ್ವದಲ್ಲಿ ಸಂಘದ ಜಿಲ್ಲೆಯ ೧೦ ತಾಲ್ಲೂಕುಗಳ ಪದಾಧಿಕಾರಿಗಳು ಜಿ.ಪಂ. ಉಪಕಾರ್ಯದರ್ಶಿ (ಅಭಿವೃದ್ಧಿ) ಸಂಜೀವಪ್ಪರವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.
ಜು. ೧ ರಿಂದ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯು ಜಾರಿಗೆ ಬಂದಿದ್ದು, ಇದು ಗುರಿ ಆಧಾರಿತ ಕಾರ್ಯಕ್ರಮವಲ್ಲ. ಆದರೆ ಸರ್ಕಾರದ ಹಂತದಲ್ಲಿ ಗುರಿ ಆಧಾರಿತ ಕಾರ್ಯಕ್ರಮವನ್ನಾಗಿ ಮಾಡಿ ಒತ್ತಡ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸ್ಪಷ್ಟವಾದ ಆದೇಶಗಳಿಲ್ಲ. ಈ ಕುರಿತು ಸರ್ಕಾರದ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಸ್ಪಷ್ಟವಾದ ನಿರ್ದೇಶನ ನೀಡುವ ಮೂಲಕ ವಿಬಿ ಜಿ ರಾಮ್ ಜಿ ಯೋಜನೆ ಸುಲಲಿತವಾಗಿ ಅನುಷ್ಠಾನ ಮಾಡಲು ಅನುವು ಮಾಡಿಕೊಡಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಸುಬ್ಬರಾಜ ಅರಸ್ ವಿ.ಆರ್. ತಿಳಿಸಿದರು.
ವಿಬಿ ಜಿ ರಾಮ್ ಜಿ ಯೋಜನೆಯು ಬೇಡಿಕೆ ಆಧಾರಿತ ಕಾರ್ಯಕ್ರಮವಾಗಿದ್ದು, ಗುರಿ ಆಧಾರಿತ ಕಾರ್ಯಕ್ರಮವಲ್ಲ ಎಂಬುದನ್ನು ಎಲ್ಲಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಪಷ್ಟಪಡಿಸುವ ಅಧಿಕೃತ ಆದೇಶ ಹೊರಡಿಸಬೇಕು. ಗ್ರಾಮೀಣ ಕುಟುಂಬಗಳಿAದ ವಾಸ್ತವವಾಗಿ ಸಲ್ಲಿಕೆಯಾಗುವ ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಮಾತ್ರ ಉದ್ಯೋಗ ಮತ್ತು ಕಾಮಗಾರಿ ಒದಗಿಸಬೇಕು. ಉದ್ಯೋಗ ಬೇಡಿಕೆಯೇ ಇಲ್ಲದ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಕೃತಕವಾಗಿ ಮಾನವ ದಿನಗಳನ್ನು ಸೃಜಿಸುವ ಅಥವಾ ಬೇಡಿಕೆಯನ್ನು ಹೆಚ್ಚಿಸುವ ಒತ್ತಡ ಹೇರಬಾರದು ಎಂದು ಪಿಡಿಓಗಳ ಸಂಘದ ಪದಾಧಿಕಾರಿಗಳು ಜಿ.ಪಂ. ಸಿಇಓಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.
ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಮತ್ತು ಜಿಲ್ಲಾಮಟ್ಟದ ತಾಂತ್ರಿಕ ಮತ್ತು ಕಾರ್ಯಾಚರಣಾ ಸಮಿತಿಯನ್ನು ರಚಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಸಮಗ್ರ ಕಾರ್ಯ ವಿಧಾನ ಸಂಹಿತೆ (ಎಸ್‌ಓಪಿ), ತರಬೇತಿ, ಮಾದರಿ ಅಂದಾಜುಗಳು ಮತ್ತು ಪೋರ್ಟಲ್ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವವರೆಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಅಸಾಧ್ಯ ಅಥವಾ ಪೂರ್ವನಿಗದಿತ ಗುರಿಗಳನ್ನು ವಿಧಿಸಬಾರದು ಎಂದು ಮನವಿ ಮಾಡಿದ್ದಾರೆ.
ಈ ಸಂಕ್ರಮಣ ಅವಧಿಯಲ್ಲಿ ಗುರಿ ಸಾಧಿಸಿಲ್ಲ ಅಥವಾ ಮಾನವ ದಿನಗಳನ್ನು ಸೃಜಿಸಿಲ್ಲ ಎಂಬ ಕಾರಣ ನೀಡಿ ನೋಟಿಸ್, ವೇತನ ತಡೆ, ದಂಡ, ಪ್ರತಿಕೂಲ ವರದಿ, ಅಮಾನತು ಅಥವಾ ಇತರ ಶಿಸ್ತು ಕ್ರಮಗಳನ್ನು ಕೈಗೊಳ್ಳಬಾರದು. ದೂರವಾಣಿ ಕರೆ, ವಾಟ್ಸಾಪ್ ಸಂದೇಶ ಅಥವಾ ಮೌಖಿಕ ಸೂಚನೆಗಳ ಬದಲಿಗೆ ಎಲ್ಲ ನಿರ್ದೇಶನಗಳನ್ನು ಅಧಿಕೃತವಾಗಿ ಲಿಖಿತ ರೂಪದಲ್ಲಿ ನೀಡಬೇಕು. ಅಧಿಕೃತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸದ್ಭಾವನೆಯಿಂದ ಕೈಗೊಂಡ ಕ್ರಮಗಳಿಗೆ ಕಾಯ್ದೆಯಡಿ ಲಭ್ಯವಿರುವ ರಕ್ಷಣೆಯನ್ನು ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಖಚಿತಪಡಿಸಬೇಕು ಎಂದು ಕೋರಿದರು.
ಇದು ಯೋಜನೆಯ ಅನುಷ್ಠಾನದಿಂದ ಹಿಂದೆ ಸರಿಯುವ ಅಥವಾ ಯೋಜನೆಗೆ ಅಸಹಕಾರ ನೀಡುವ ಬೇಡಿಕೆಯಾಗಿಲ್ಲ. ಯೋಜನೆಯನ್ನು ಕಾನೂನು ಬದ್ದವಾಗಿ, ಪಾರದರ್ಶಕವಾಗಿ, ತಾಂತ್ರಿಕವಾಗಿ ಸುರಕ್ಷಿತವಾಗಿ ಹಾಗೂ ಗ್ರಾಮೀಣ ಜನರಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂಬ ಮನವಿಯಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಯೋಜನೆಯ ಮೂಲ ಉದ್ದೇಶವು ಗ್ರಾಮೀಣ ಕುಟುಂಬಗಳ ಉದ್ಯೋಗ ಬೇಡಿಕೆಗೆ ಸ್ಪಂದಿಸುವುದಾಗಿದ್ದು, ಅಧಿಕಾರಿಗಳ ಮೇಲೆ ಪೂರ್ವನಿಗದಿತ ಗುರಿಗಳನ್ನು ವಿಧಿಸಿ ಕೃತಕವಾಗಿ ಬೇಡಿಕೆ ಮತ್ತು ಮಾನವ ದಿನಗಳನ್ನು ಸೃಷ್ಟಿಸುವುದಲ್ಲ. ಆದ್ದರಿಂದ ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಜಿಲ್ಲಾ ಮಟ್ಟದ ಸಮಗ್ರ ಮಾರ್ಗಸೂಚಿ ಹಾಗೂ ಮಧ್ಯಂತರ ರಕ್ಷಣಾತ್ಮಕ ನಿರ್ದೇಶನಗಳನ್ನು ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಮಂಜುನಾಥ್ ಎಸ್.ಎಸ್., ರಾಜ್ಯ ಪರಿಷತ್ ಸದಸ್ಯ ವೆಂಕಟೇಶ್ ಡಿ.ವಿ., ಪ್ರಧಾನ ಕಾರ್ಯದರ್ಶಿ ತೇಜೇಶ್, ಕಾರ್ಯಾಧ್ಯಕ್ಷ ಲೋಕೇಶ್ ಜಿ., ಉಪಾಧ್ಯಕ್ಷ ತೇಜಸ್ವಿನಿ, ಉಪಾಧ್ಯಕ್ಷೆ ತೀರ್ಥ, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಹಾಸ ಎಸ್.ಎಸ್., ಕೋಕಿಲ, ಕ್ರೀಡಾ ಕಾರ್ಯದರ್ಶಿ ಸುನೀಲ್‌ಕುಮಾರ್ ಎನ್., ಸಾಂಸ್ಕöÈತಿ ಕಾರ್ಯದರ್ಶಿ ವಿಜಯಲಕ್ಷಿ÷್ಮÃ ಆರ್. ಪಾಟೀಲ್, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸಮೂರ್ತಿ ಟಿ.ವಿ., ಸಿರಾ ವೆಂಕಟೇಶಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

(Visited 1 times, 1 visits today)