ಹುಳಿಯಾರು: ಹೇಮಾವತಿ ನೀರಿಗಾಗಿ ತಾಲೂಕಿನ ರೈತರು, ಸಮಾಜ ಸೇವಕರು, ಹೋರಾಟಗಾರರು ಸೇರಿದಂತೆ ಯಾರೊಬ್ಬರು ಕೂಡ ಆತಂಕ ಪಡುವ ಅಗತ್ಯವಿಲ್ಲ. ನವಿಲೆ ಕೆರೆಗೆ ನೀರು ಹರಿಸುವ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ನೀರು ಪೂರೈಸಲು ಸಂಪೂರ್ಣ ಬದ್ಧರಾಗಿದ್ದೇವೆ ಎಂದು ಶಾಸಕ ಸಿ.ವಿ. ಸುರೇಶ್ ಬಾಬು ಭರವಸೆ ನೀಡಿದ್ದಾರೆ.
ಹುಳಿಯಾರಿನ ಜಿ.ಎಂ.ಆರ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ೨೦೧೩ ರಿಂದಲೇ ಹೇಮಾವತಿ ನಾಲೆಯ ಮೂಲಕ ತಾಲೂಕಿನ ಹಲವಾರು ಕೆರೆಗಳಿಗೆ ನೀರು ಹರಿಸುವ ಯೋಜನೆಗಳು ಜಾರಿಯಲ್ಲಿದ್ದು, ಹುಳಿಯಾರು ಭಾಗದ ಕೆರೆಗಳಿಗೆ ಈಗಾಗಲೇ ನೀರು ತಲುಪಿಸುವ ಕೆಲಸ ನಡೆಯುತ್ತಿದೆ. ದಬ್ಬೇಘಟ್ಟದ ಮೂಲಕ ನವಿಲೆ ಕೆರೆಗೆ ನೀರು ತರುವ ಯೋಜನೆಯು ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಶೇಕಡಾ ೯೯ ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಹಿAದೆ ಕೆರೆಯ ಒಂದು ಭಾಗದಲ್ಲಿ ಮಣ್ಣು ಕುಸಿದಿದ್ದರಿಂದ ಕೆಲಸದಲ್ಲಿ ಸ್ವಲ್ಪ ವಿಳಂಬವಾಗಿತ್ತು. ಪ್ರಸ್ತುತ ಕೇವಲ ೧೦೦ ಮೀಟರ್ ಕೆಲಸ ಮಾತ್ರ ಬಾಕಿ ಇದ್ದು, ಅದನ್ನು ಮುಂದಿನ ಒಂದು ವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
ಗೊರೂರು ಜಲಾಶಯದಿಂದ ನೀರು ಬಿಡಲು ತೀರ್ಮಾನ ಕೈಗೊಂಡ ತಕ್ಷಣವೇ ಜೀರೋ ಪಾಯಿಂಟ್‌ನಿAದ ಕೊನೆಯ ಹಂತದವರೆಗಿನ ಸಣ್ಣಪುಟ್ಟ ಅಡೆತಡೆಗಳನ್ನು ತೆರವುಗೊಳಿಸಲಾಗುತ್ತದೆ. ಈಗಾಗಲೇ ಎಲ್ಲಾ ಸೇತುವೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇಂದೇ ನೀರು ಬಿಟ್ಟರೂ ನವಿಲೆ ಕೆರೆಗೆ ಹರಿಸಲು ಯಾವುದೇ ತಾಂತ್ರಿಕ ತೊಡಕುಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಗೊರೂರು ಜಲಾಶಯಕ್ಕೆ ೧,೬೦೦ ಕ್ಯೂಸೆಕ್ಸ್ ಒಳಹರಿವು ಬರುತ್ತಿದ್ದು, ಜಲಾಶಯ ಭರ್ತಿಯಾಗಲು ಇನ್ನು ೧೮ ಅಡಿ ನೀರು ಬರಬೇಕಾಗಿದೆ. ಕಮಿಟಿ ಸಭೆಯಲ್ಲಿ ನೀರು ಬಿಡುವ ಕುರಿತು ನಿರ್ಧಾರ ಕೈಗೊಂಡ ತಕ್ಷಣ ನಮ್ಮ ಭಾಗಕ್ಕೂ ನೀರು ತರಲಾಗುವುದು. ರೈತರಿಗೆ ಅಥವಾ ಹೋರಾಟಗಾರರಿಗೆ ಏನಾದರೂ ಸಂಶಯಗಳಿದ್ದರೆ ಸ್ವತಃ ಸ್ಥಳಕ್ಕೆ ಕರೆದೊಯ್ದು ಕಾಮಗಾರಿ ತೋರಿಸಲು ಸಿದ್ಧರಿದ್ದೇವೆ. ಅವರ ಪ್ರತಿಯೊಂದು ಗೊಂದಲ ನಿವಾರಿಸಲು ತಾವು ಬದ್ಧರಾಗಿರುವುದಾಗಿ ಶಾಸಕರು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜಾತ್ಯತೀತ ಜನತಾದಳದ ತಾಲೂಕು ಅಧ್ಯಕ್ಷ ಆರ್.ರಾಮಚಂದ್ರಯ್ಯ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮಂಜಮ್ಮ ಹಾಗೂ ಲೋಹಿತಾಬಾಯಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಚೇತನ ಗಂಗಾಧರ್, ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಹೇಮಕ್ಕ, ಹುಳಿಯಾರು ಹೋಬಳಿ ಜೆಡಿಎಸ್ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಯುವ ಜನತಾದಳದ ಉಪಾಧ್ಯಕ್ಷ ಗೌಡಿ, ಕೇಶವಪುರ ಕಿರಣ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ರಿಯಾಜ್, ಪುರಸಭಾ ಸದಸ್ಯರಾದ ರಾಜಶೇಖರ್, ಮಲ್ಲಿಕಾರ್ಜುನ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)



