ತುಮಕೂರು: ನಗರದ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಆವರಣದಲ್ಲಿ ಅಮಾಯಕ ದಲಿತ ಕಾರ್ಮಿಕರಿಂದ ಮಲಗುಂಡಿ ಸ್ವಚ್ಛ ಮಾಡಿಸಿದ ಹೇಯ ಕೃತ್ಯ ನಡೆದಿದೆ. ದಲಿತ ಸಮುದಾಯದಿಂದ ಮುಖ್ಯಮಂತ್ರಿ ಆಗಲು ಹೊರಟಿರುವ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಇದೂವರೆಗೆ ಈ ಘಟನೆ ಬಗ್ಗೆ ಒಂದು ಹೇಳಿಕೆ ನೀಡಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ಟೀಕಿಸಿದರು.
ಮಲ ಬಾಚಿಸಿರುವ ಕೆಇಬಿ ಅಸೋಸಿಯೇಷನ್ ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾದಿಂದ ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವೈ.ಹೆಚ್. ಹುಚ್ಚಯ್ಯ, ದಲಿತರ ಕೈಯ್ಯಲ್ಲಿ ಮಲ ಎತ್ತಿಸಿದ ಕೃತ್ಯ ಖಂಡನೀಯ. ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ, ಇದೇ ಸಮುದಾಯದಿಂದ ಮುಖ್ಯಮಂತ್ರಿ ಆಗಲು ಹೊರಟಿರುವ, ದಲಿತರ ರಕ್ಷಣೆ ಮಾಡುವಲ್ಲಿ ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಹಿಂದೆ ಪೌರಾಡಳಿತ ಸಚಿವರಾಗಿದ್ದ ಬಸವಲಿಂಗಪ್ಪ ಅವರು ಮಲಹೊರುವ ಪದ್ದತಿ ನೀಷೇಧ ಕಾನೂನು ಜಾರಿಗೆ ಕಾರಣರಾಗಿದ್ದರು. ಡಿಸಿಎಂ ಡಾ.ಪರಮೇಶ್ವರ್ ಅವರು ಬಸವಲಿಂಗಪ್ಪ ಅವರಂತೆ ದಲಿತರ ಪರ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಯಾವತ್ತೂ ಕಾಳಜಿವಹಿಸಿಲ್ಲ ಎಂದು ಎಂದು ಆರೋಪಿಸಿದರು.
ಅಮಾನವೀಯವಾದ ಮಲ ಹೊರುವ ಪದ್ಧತಿ ನಿಷೇಧವಿದ್ದರೂ ಜಾರಿಯಲ್ಲಿದ್ದರೂ ತುಮಕೂರು ಕೆ.ಇ.ಬಿ ಇಂಜಿನಿಯರ್ಸ್ ಅಸೋಸಿಯೇಷನ್ ಆವರಣದಲ್ಲಿ ಅಮಾಯಕ ಕಾರ್ಮಿಕರಿಂದ ಮಲ ಬಾಚಿಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಮತ್ತೆಂದು ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವೈ.ಹೆಚ್. ಹುಚ್ಚಯ್ಯ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮುಖಂಡ ಎಸ್.ಪಿ ಚಿದಾನಂದ್ ಅವರು, ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಇಂತಹ ನಿಷೇಧಿತ ಹಾಗೂ ಅಮಾನವೀಯವಾದಂತಹ ಘಟನೆ ಸುಶಿಕ್ಷಿತರಿಂದ ಜರುಗಿರುವುದು ಆಘಾತಕಾರಿ ವಿಷಯ. ಮಲಹೊರುವ ಪದ್ಧತಿಯನ್ನು ಪೋಷಿಸುವ ಇಂತಹ ಸಮಾಜಘಾತುಕರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾಧ್ಯಕ್ಷ ವೈ.ಹೆಚ್. ರವಿಚಂದ್ರ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ಕೆ.ಇ.ಬಿ ಅಸೋಸಿಯೇಷನ್ ಆವರಣದಲ್ಲಿದ್ದ ಶೌಚಗುಂಡಿಯನ್ನು ತುಮಕೂರಿನ ನಂದೀಶ್, ಅರುಣ್, ಮಧುಗಿರಿಯ ಮೂರ್ತಿ ನಾಯ್ಕ ಹಾಗೂ ನವೀನ್ ಎಂಬ ಕಾರ್ಮಿಕರಿಂದ ಕೆಇಬಿ ಅಸೋಷಿಯೇಷನ್ ಪದಾಧಿಕಾರಿಗಳು ಸ್ವಚ್ಛ ಮಾಡಿಸಿದ್ದಾರೆ. ಕಾರ್ಮಿಕರ ಬಡತನದ ಹಾಗೂ ಹಸಿವಿನ ದುರ್ಲಾಭ ಪಡೆದು ಮಲವನ್ನು ಬರಿಗೈನಲ್ಲಿ ಬಾಚಿಸಿ ಟ್ರಾಕ್ಟರ್‌ಗೆ ತುಂಬಿಸಿದ್ದಾರೆ. ಇದೊಂದು ಅಮಾನವೀಯ, ಕಾನೂನು ಬಾಹಿರ, ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹಾಗೂ ವ್ಯಕ್ತಿಗೌರವಕ್ಕೆ ಚ್ಯುತಿ ತರಿಸುವಂತಹ ದುರ್ಘಟನೆಯಾಗಿದೆ ಎಂದರು.
ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಈ ಕಾಯ್ದೆ ಅಡಿಯಲ್ಲಿ ಯಾವುದೇ ವ್ಯಕ್ತಿಯನ್ನು ಮಲಬಾಚಲು ಅಥವಾ ಗಲೀಜು ಸ್ವಚ್ಚಗೊಳಿಸಲು ನೇರವಾಗಿಯಾಗಲೀ ಅಥವಾ ಪರೋಕ್ಷವಾಗಿಯಾಗಲೀ ಬಳಸಿಕೊಳ್ಳುವಂದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಇಂತಹ ಅಮಾನವೀಯ ಕೆಲಸಕ್ಕೆ ಬಳಸಿಕೊಳ್ಳುವುದು ಪ.ಜಾ, ಪ.ಪಂ ದೌರ್ಜನ್ಯ ನಿಷೇಧ ಕಾಯ್ದೆಯಡಿಯಲ್ಲಿ ಜಾತಿ ನಿಂದನೆ ಮತ್ತು ತೀವ್ರ ಸ್ವರೂಪದ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್, ಎಸ್.ಸಿ. ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಹೆಚ್.ಎ. ಆಂಜನಪ್ಪ, ಉಪಾಧ್ಯಕ್ಷರಾದ ವರದಣ್ಣ, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಂಜನಮೂರ್ತಿ, ಅಶೋಕ್, ಮುಖಂಡರಾದ ಕೆ. ವೇದಮೂರ್ತಿ, ಫ್ರೂಟ್ ಗಿರೀಶ್, ನವೀನ್‌ಕುಮಾರ್, ರಾಕೇಶ್, ಶಿವರಾಜ್, ಪ್ರತಾಪ್, ಜಗದೀಶ್, ನಾಗರಾಜು, ರತ್ನಮ್ಮ ಮೊದಲಾದವರು ಭಾಗವಹಿಸಿದ್ದರು.
ನಂತರ ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.

(Visited 1 times, 1 visits today)