ತುಮಕೂರು: ಕೃಷಿ ಇಲಾಖೆ ಮತ್ತು ರೇಡಿಯೋ ಸಿದ್ಧಾರ್ಥ ೯೦.೮ ಎಫ್.ಎಂ. ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಸಹಯೋಗದಲ್ಲಿ “ಕೃಷಿ ಕಣಜ” ಬಾನುಲಿ ಸರಣಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಅವರು ಚಾಲನೆ ಬುಧುವಾರದಂದು ನೀಡಿದರು.
ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಿದ್ದಾರ್ಥ ರೇಡಿಯೋ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಕೃಷಿ ಇಲಾಖೆಯ ಯೋಜನೆಗಳು ಮತ್ತು ತಾಂತ್ರಿಕ ಮಾಹಿತಿ ಸರಣಿ ಸಂವಹನ ಕಾರ್ಯಕ್ರಮ ‘ಕೃಷಿ ಕಣಜ’ ಬಾನುಲಿ ಸರಣಿಗೆ ಗಿಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಶುಭ ಕಲ್ಯಾಣ್ ಅವರು ೩೦ ದಿನಗಳ ಸರಣಿ ಕಾರ್ಯಕ್ರಮಕ್ಕೆ ಕೃಷಿ ಇಲಾಖೆಯ ವಿವಿಧ ಅಧಿಕಾರಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರೈತರಿಗೆ ಕೃಷಿ ಉಪಕರಣಗಳನ್ನು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವತಿಯಿಂದ ಈಗಾಗಲೇ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರು ಕೂಡ ರೈತರು ನೀರಾವರಿ ಪದ್ಧತಿ ಹಾಗೂ ಹನಿ ನೀರಾವರಿ ಪದ್ಧತಿಯಿಂದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಎತ್ತಿನಹೊಳೆ ಮತ್ತು ಹೇಮಾವತಿ ಲಿಂಕ್ ಕೆನಾಲ್ ಯೋಜನೆಗಳ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದ್ದು, ಈ ವರ್ಷವೇ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ ಎಂದರು.
ರೇಡಿಯೋ ಸಿದ್ದಾರ್ಥ ಸಮುದಾಯ ಬಾನುಲಿ ಆಗಿ ಜಿಲ್ಲೆಯಾದ್ಯಂತ ಕೃಷಿಕರನ್ನು ತಲುಪಬೇಕು.ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯಿಂದ ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸಮಾಡಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಕೃಷಿ ಯೋಜನೆಗಳು ಮತ್ತು ಅದರ ಸದುಪಯೋಗಗಳನ್ನು ಹೇಗೆ ಬಳಸಬೇಕು ಎಂಬುದರ ಅರಿವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಒತ್ತಿ ಹೇಳಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಲಕ್ಷ್ಮಣ. ಎಸ್. ಕಳ್ಳೆನ್ನವರ ರವರು ಮಾತನಾಡಿ, ಕೃಷಿ ಸಮುದಾಯಕ್ಕಾಗಿ ಕೃಷಿ ಇಲಾಖೆ ಮತ್ತು ರೇಡಿಯೋ ಸಿದ್ದಾರ್ಥ ವತಿಯಿಂದ “ಸರಣಿ ಬಾನುಲಿ” ಕಾರ್ಯಕ್ರಮ ಮಾಡುತ್ತಿದ್ದು, ರೈತರಿಗೆ ಬೆಳೆಗಳಿಗೆ ಸಂಬAಧಪಟ್ಟ ಕಾರ್ಯಕ್ರಮ, ಕೃಷಿ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವು ಕೃಷಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಧುಗಿರಿ ವಿಭಾಗದ ಉಪ ಕೃಷಿ ನಿರ್ದೇಶಕರಾದ ಎಚ್. ಎಲ್. ಚಂದ್ರಕುಮಾರ್, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ. ಟಿ ಮುದ್ದೇಶ್, ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ, ಕೃಷಿ ಇಲಾಖೆಯ ಅಧಿಕಾರಿಗಳು, ಉಪನ್ಯಾಸಕರು, ಹಾಗೂ ಮಾಧ್ಯಮ ವಿದ್ಯಾರ್ಥಿಗಳು ಹಾಜರಿದ್ದರು.

(Visited 1 times, 1 visits today)