
ತುಮಕೂರು: ಮಕ್ಕಳ ಯಶಸ್ಸಿಗೆ ಪೋಷಕರ ಸಹಕಾರ ಪ್ರಮುಖವಾದದ್ದು. ಕ್ರೀಡೆ ಕೇವಲ ಆಟಕ್ಕೆ ಅಷ್ಟೇ ಸೀಮಿತವಲ್ಲ, ಅದು ಉದ್ಯೋಗವನ್ನು ಪಡೆಯಲು ಕೂಡ ಸಹಕಾರಿಯಾಗಲಿದೆ ಎಂದು ಕರ್ನಾಟಕ ಕ್ರೀಡಾ ರತ್ನ ಹಾಗೂ ಖೋ-ಖೋ ವಿಶ್ವಕಪ್ ವಿಜೇತೆ ಚೈತ್ರ ಬಿ. ಅವರು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಜು. ೨ ಗುರುವಾರದಂದು ಆಯೋಜಿಸಲಾಗಿದ್ದ ೨೦೨೫-೨೦೨೬ನೇ ಸಾಲಿನ ಸ್ನಾತಕೋತ್ತರ ಅಂತರ್ ವಿಭಾಗಗಳ ವಾರ್ಷಿಕ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವÀರಲು ಮಾತನಾಡಿ, ಚೈತ್ರ ಅವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾಣ್ಣುಡಿಯನ್ನು ಸಾಬೀತುಪಡಿಸಿದ್ದಾರೆ. ನಮ್ಮ ಸಾಧನೆ ಕೇವಲ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸಂಭ್ರಮ ತರುತ್ತದೆ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗ್ರಾಮೀಣ ಭಾಗದ ಮತ್ತು ಬಡತನದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳೇ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವಲ್ಲಿ ಪೋಷಕರಿಗಿಂತ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡಾಗ ಇಂತಹ ದೊಡ್ಡ ಸಾಧನೆಗಳು ಸಾಧ್ಯವಾಗುತ್ತವೆ. ಮಕ್ಕಳ ಸಾಧನೆಯೇ ಗ್ರಾಮಕ್ಕೆ, ಪೋಷಕರಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ವಿಚಾರ ಎಂದರು.
ಸ್ನಾತಕೋತ್ತರ ಅಂತರ್ ವಿಭಾಗಗಳ ವಾರ್ಷಿಕ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಸುದೀಪ್ ಕುಮಾರ್ ಆರ್. ಎಲ್ಲರನ್ನೂ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ. ರವಿ ಸಿ. ಎಂ. ಕಾರ್ಯಕ್ರಮ ನಿರೂಪಿಸಿದರು. ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಎಚ್. ಎಸ್. ಹಾಗೂ ಹಣಕಾಸು ಅಧಿಕಾರಿಗಳಾದ ನರಸಿಂಹಮೂರ್ತಿ ಉಪಸ್ಥಿತರಿದ್ದರು.


