
ತುಮಕೂರು: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆ ರುಚಿ ಮತ್ತು ಶುಚಿಯಾದ ಬಿಸಿ ಊಟ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ ಶಿಕ್ಷಕರಿಗೆ ಸೂಚನೆ ನೀಡಿದರು.
ತುಮಕೂರು ತಾಲ್ಲೂಕು ಅರೆಗುಜ್ಜನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕದರನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗೆ ಇಂದು ಭೇಟಿ ನೀಡಿ ಮಕ್ಕಳ ಜೊತೆ ಊಟ ಸವಿದು ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಎಷ್ಟು ಪ್ರಮುಖವೋ, ಶುಚಿ ಮತ್ತು ರುಚಿಯಾದ ಊಟ ಕೂಡ ಅಷ್ಟೇ ಪ್ರಮುಖವಾದದ್ದು. ಹೆಚ್ಚು ತರಕಾರಿ ಬಳಸಿ ಪೌಷ್ಠಿಕ ಆಹಾರ ನೀಡಬೇಕು. ಪ್ರತೀ ದಿನ ವೇಳಾ ಪಟ್ಟಿಯಲ್ಲಿರುವ ಆಹಾರವನ್ನೇ ನೀಡಬೇಕು. ತಪ್ಪದೇ ಮೊಟ್ಟೆ ಮತ್ತು ಬಾಳೆಹಣ್ಣನ್ನು ನೀಡಬೇಕು ಎಂದರು. ಮಕ್ಕಳಿಗೆ ಊಟ ನೀಡುವ ಮೊದಲು ಶಿಕ್ಷಕರು ಊಟ ಸವಿದ ನಂತರ ಮಕ್ಕಳಿಗೆ ಊಟ ನೀಡಬೇಕು ಎಂದರು. ಶಾಲಾ ಆವರಣದಲ್ಲಿ ಉತ್ತಮ ಪರಿಸರ ಕಾಪಾಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ತಾಕೀತು ಮಾಡಿದರು.
ಎಸ್‌ಐಆರ್ ನಮೂನೆಗಳ ವಿತರಣೆ: ಕದರನಹಳ್ಳಿ ಗ್ರಾಮದಲ್ಲಿ ಎಸ್‌ಐಆರ್ ಎನ್ಯೂಮರೇಶನ್ ನಮೂನೆ ಗಳನ್ನು ವಿತರಣೆ ಮಾಡಿದರು. ಪ್ರತಿ ಮನೆ-ಮನೆಗೆ ಎಸ್‌ಐಆರ್ ಎನ್ಯೂಮರೇಶನ್ ನಮೂನೆಗಳನ್ನು ವಿತರಿಸಿ, ಆ ನಂತರ ಭರ್ತಿ ಮಾಡಿದ ನಮೂನೆ ಗಳನ್ನು ಪಡೆಯುವಂತೆ ಬಿ.ಎಲ್.ಒಗಳಿಗೆ ಸೂಚನೆ ನೀಡಿದರು.
ನೀರು ಶುದ್ದೀಕರಣ ಘಟಕ ಪರಿಶೀಲನೆ: ತುಮಕೂರು ತಾಲ್ಲೂಕು ಊರ್ಡಿಗೆರೆ ಗ್ರಾಮ ಪಂಚಾಯಿತಿ ಕರಡಿಗುಡ್ಡಕೆರೆ ಬಳಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶುದ್ಧ ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ನಾರಾಯಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೃಷ್ಣಕಾಂತ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಜರಿದ್ದರು.


