
ಹುಳಿಯಾರು: ಹುಳಿಯಾರಿನ ನೂರು ವರ್ಷಗಳ ಇತಿಹಾಸವಿರುವ ಬ್ರಿಟೀಷರ ಕಾಲದ ಭವ್ಯ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಕಟ್ಟಡದ ಗೋಡೆಗಳ ಮೇಲೆ ಗಿಡಗಳು ಬೆಳೆದು, ಇಡೀ ಪಾರಂಪರಿಕ ಕಟ್ಟಡವೇ ಹಾಳಾಗುತ್ತಿರುವ ಆತಂಕದ ಕುರಿತು ಪತ್ರಿಕೆ ಇತ್ತೀಚೆಗೆ ವಿಸ್ತöÈತವಾದ ವಿಶೇಷ ವರದಿಯನ್ನು ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಈ ವರದಿಯ ಫಲಾಶ್ರುತಿಯಾಗಿ ಸದ್ಯ ಶಿಕ್ಷಣ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಕಟ್ಟಡದ ಮೇಲಿದ್ದ ದೊಡ್ಡ ದೊಡ್ಡ ಗಿಡಗಳನ್ನು ತೆರವುಗೊಳಿಸುವ ಮೂಲಕ ಪ್ರಾಥಮಿಕ ಕ್ರಮಕ್ಕೆ ಮುಂದಾಗಿದೆ. ಇಲಾಖೆಯ ಈ ತಕ್ಷಣದ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆಯಾದರೂ, ಕಾಮಗಾರಿ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರಿಟಿಷರ ಕಾಲದ ಈ ಐತಿಹಾಸಿಕ ಕಟ್ಟಡವನ್ನು ಸಾಂಪ್ರದಾಯಿಕ ಗಾರೆಯಿಂದ ಅತ್ಯಂತ ಸುಭದ್ರವಾಗಿ ನಿರ್ಮಿಸಲಾಗಿದ್ದರೂ, ಗೋಡೆಗಳ ಮೇಲೆ ಬೆಳೆದಿದ್ದ ಗಿಡಗಳ ಬೇರುಗಳು ಆಳಕ್ಕೆ ಇಳಿದು ಇಡೀ ವಾಸ್ತುಶಿಲ್ಪಕ್ಕೆ ಧಕ್ಕೆ ತರುತ್ತಿದ್ದವು. ಪತ್ರಿಕೆಯ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ದೊಡ್ಡ ಗಿಡಗಳನ್ನು ಕತ್ತರಿಸಿ ಹಾಕಿರುವುದರಿಂದ ಗೋಡೆಗಳು ಸಂಪೂರ್ಣ ಡ್ಯಾಮೇಜ್ ಆಗುವ ತಕ್ಷಣದ ಆತಂಕ ಸದ್ಯಕ್ಕೆ ದೂರಾಗಿದೆ.
ಆದರೆ, ಇಲ್ಲೇ ಇಲಾಖೆಯ ನಿರ್ಲಕ್ಷ÷್ಯವೂ ಎದ್ದು ಕಾಣುತ್ತಿದೆ. ಕೇವಲ ಕಣ್ಣಿಗೆ ಕಾಣುವ ದೊಡ್ಡ ಗಿಡಗಳನ್ನು ಮಾತ್ರ ತೆರವು ಮಾಡಿ ಕೈತೊಳೆದುಕೊಂಡಿದ್ದಾರೆ. ಆದರೆ, ಗೋಡೆಯ ಬಿರುಕುಗಳಲ್ಲಿ ಇಂದಿಗೂ ಸಣ್ಣದಾಗಿ ಚಿಗುರೊಡೆಯುತ್ತಿರುವ ಗಿಡಗಳು ಹಾಗೂ ಹುಲ್ಲುಗಳನ್ನು ಹಾಗೆಯೇ ಬಿಡಲಾಗಿದೆ. ಮುಂದಿನ ಮಳೆಗಾಲಕ್ಕೆ ಇವು ಮತ್ತೆ ಹೆಮ್ಮರವಾಗಿ ಬೆಳೆದು ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ, ಈ ಅರೆಬರೆ ಕೆಲಸದಿಂದ ಕಟ್ಟಡಕ್ಕೆ ಶಾಶ್ವತ ಪರಿಹಾರ ಸಿಕ್ಕಂತಾಗಿಲ್ಲ.
ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಹಿರಿಯ ನಾಗರಿಕರ ಪ್ರಕಾರ, ಈ ಐತಿಹಾಸಿಕ ಕುರುಹನ್ನು ಮುಂದಿನ ನೂರಾರು ವರ್ಷಗಳ ಕಾಲ ಉಳಿಸಿಕೊಳ್ಳಬೇಕಾದರೆ ಕೇವಲ ಗಿಡಗಳನ್ನು ಕತ್ತರಿಸಿದರೆ ಸಾಲದು. ಗಿಡಗಳನ್ನು ಬೇರು ಸಮೇತ ಕಿತ್ತುಹಾಕಿ, ಅವುಗಳಿಂದ ಗೋಡೆಗೆ ಆಗಿರುವ ಹಾನಿಯನ್ನು ಸರಿಪಡಿಸಲು ತಕ್ಷಣವೇ ಅಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡಬೇಕಾಗಿದೆ. ಇದರೊಂದಿಗೆ, ಬ್ರಿಟಿಷ್ ಶೈಲಿಯ ಹಳೆಯ ಕಿಟಕಿಗಳು ಮತ್ತು ಕದಗಳು ಸರಿಯಾದ ನಿರ್ವಹಣೆಯಿಲ್ಲದೆ ಮುರಿದುಬೀಳುವ ಸ್ಥಿತಿಯಲ್ಲಿದ್ದು, ಅವುಗಳಿಗೂ ತಕ್ಷಣವೇ ಮರಗೆಲಸದ ದುರಸ್ತಿ ಮತ್ತು ಬಣ್ಣದ ಲೇಪನವಾಗಬೇಕಿದೆ.
ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಎಲ್ಕೆಜಿ, ಯುಕೆಜಿ ಪ್ರವೇಶಕ್ಕೆ ಸೀಟು ಸಿಗದೆ ಪೋಷಕರು ಮುಗಿಬೀಳುವ ಇಂತಹ ಜೀವಂತ ಸರ್ಕಾರಿ ಶಾಲೆಯ ಮೂಲಸೌಕರ್ಯಗಳನ್ನು ಕಾಪಾಡುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕು. ಹೊಸ ಕಟ್ಟಡಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುವ ಸರ್ಕಾರ, ಈ ಪಾರಂಪರಿಕ ಕಟ್ಟಡದ ಸುಸ್ಥಿತಿಗಾಗಿ ಅತ್ಯಲ್ಪ ಹಣ ಖರ್ಚು ಮಾಡಲು ಹಿಂಜರಿಯುತ್ತಿರುವುದು ದುರದೃಷ್ಟಕರ. ಶಿಕ್ಷಣ ಇಲಾಖೆಯು ಕೇವಲ ‘ವರದಿಯಾಯಿತು’ ಎಂಬ ಕಾರಣಕ್ಕೆ ಕಾಟಾಚಾರಕ್ಕೆ ಗಿಡಗಳನ್ನು ಕತ್ತರಿಸಿ ಸುಮ್ಮನಾಗದೆ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಟ್ಟಡದ ಗೋಡೆಗಳ ಪ್ಲಾಸ್ಟಿಂಗ್ ಹಾಗೂ ಕಿಟಕಿಗಳ ದುರಸ್ತಿ ಕಾರ್ಯವನ್ನು ಸಂಪೂರ್ಣಗೊಳಿಸಬೇಕು ಎಂದು ಪೋಷಕರು, ಹಳೆಯ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.


