ಶಿರಾ: ರಾಜ್ಯದ ೩,೮೦೦ಕ್ಕೂ ಅಧಿಕ ಸ್ಲಂಗಳಲ್ಲಿ ಸ್ಲಂ ಜನರ ಸಂಘಟನೆಯು ವಿಸ್ತಾರಗೊಳ್ಳಬೇಕು. ಈ ಸಂಘಟನೆಯು ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯಗಳ ಹಾದಿಯಲ್ಲಿ ಮುನ್ನಡೆದು, ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ಖ್ಯಾತ ನ್ಯಾಯವಾದಿಗಳು ಹಾಗೂ ಮಾನವ ಬಂಧುತ್ವ ವೇದಿಕೆಯ ರಾಜ್ಯ ಮುಖಂಡ ಅನಂತ್ ನಾಯ್ಕ್ ಕರೆ ನೀಡಿದರು.
ಇಲ್ಲಿನ ಲೋಹಿಯಾ ಸಮತಾ ವಿದ್ಯಾಲಯದ ಬಂಧುತ್ವ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಲಂ ಜನರ ಭೂಮಿ, ವಸತಿ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಕುರಿತ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಾಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಾಗಾರವನ್ನು ಸ್ಲಂ ಜನರ ಸಂಘಟನೆ ಕರ್ನಾಟಕ, ಮಾನವ ಬಂಧುತ್ವ ವೇದಿಕೆ ಹಾಗೂ ಆಕ್ಷನ್ ಏಡ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಸ್ಲಂಗಳು ಮಿನಿ ಭಾರತದಂತೆ: ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸ್ಲಂಗಳು ಮಿನಿ ಭಾರತದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿವೆ. ಇಲ್ಲಿನ ಜನರ ಭ್ರಾತೃತ್ವ ಮತ್ತು ಭಾವೈಕ್ಯತೆಯನ್ನು ನೋಡಿ ಇಡೀ ಜಗತ್ತೇ ಕಲಿಯಬೇಕಿದೆ. ಜಾತಿ, ಧರ್ಮದ ಆಧಾರದ ಮೇಲೆ ಯಾರ ಉದ್ಧಾರವೂ ಸಾಧ್ಯವಿಲ್ಲ. ಸ್ಲಂ ನಿವಾಸಿಗಳು ತಮ್ಮ ಭೂಮಿ ಮತ್ತು ವಸತಿ ಹಕ್ಕುಗಳಿಗಾಗಿ ಸಂಘಟಿತರಾಗಿ ನಿರಂತರ ಹೋರಾಟ ನಡೆಸಬೇಕು. ಸಾಮಾಜಿಕ ಪರಿವರ್ತನೆಗಾಗಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸ್ಲಂ ಜನರ ಸಂಘಟನೆ ಕರ್ನಾಟಕದ ರಾಜ್ಯಾಧ್ಯಕ್ಷ ಐಸಾಕ್ ಅಮೃತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘಟನೆಯು ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದೆ. ಯಾವುದೇ ಸ್ಲಂ ನಿವಾಸಿಗಳು ಯಾರ ಹಂಗಿನಲ್ಲೂ ಬದುಕದೆ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ನಾವು ವಾಸಿಸುವ ನಗರಗಳಲ್ಲಿ ಭೂಮಿ ಹಕ್ಕನ್ನು ಪಡೆದು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಚೇತನ್ ಕುಮಾರ್ ಬಿ.ಆರ್., ಭಾನು ಪ್ರತಾಪ್ ಸಿಂಹ ಜಿ.ಎಸ್., ಖ್ಯಾತ ವಕೀಲರು ಹಾಗೂ ಬರಹಗಾರರಾದ ಶ್ರೀಮತಿ ಸೌಮ್ಯ ಲಕ್ಷಿ÷್ಮ ಭಟ್ ಮತ್ತು ಲೋಹಿಯಾ ಸಮತಾ ವಿದ್ಯಾಲಯ ಬಂಧುತ್ವ ಅಧ್ಯಯನ ಕೇಂದ್ರದ ವ್ಯವಸ್ಥಾಪಕರಾದ ಗೋವಿಂದರಾಜು ಉಪಸ್ಥಿತರಿದ್ದರು.
ಬೆಂಗಳೂರು, ವಿಜಯನಗರ, ಚಿತ್ರದುರ್ಗ, ಕಲ್ಬುರ್ಗಿ, ಹಾವೇರಿ, ವಿಜಯಪುರ, ಬೀದರ್, ಯಾದಗಿರಿ, ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಸ್ಲಂ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

(Visited 1 times, 1 visits today)