
ಹುಳಿಯಾರು: ಸರ್ಕಾರದ ‘ಮನೆ ಮನೆ ಗಂಗೆ’ ಯೋಜನೆ ಇನ್ನೂ ತಲುಪದ ಆ ಹಳ್ಳಿಯಲ್ಲಿ ಕುಡಿಯುವ ನೀರಿಗೆ ಇರುವುದೇ ಎರಡು ಸಿಸ್ಟನ್‌ಗಳು. ಆದರೆ, ಆ ಸಿಸ್ಟನ್‌ಗಳ ನಲ್ಲಿಗಳು ಸತತವಾಗಿ ಸೋರುತ್ತಿದ್ದರೂ ರಿಪೇರಿ ಮಾಡುವವರೇ ಇಲ್ಲದಂತಾಗಿದೆ. ನಿತ್ಯವೂ ನೂರಾರು ಲೀಟರ್ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಅಲ್ಲದೆ ಕಾಲಕಾಲಕ್ಕೆ ಚರಂಡಿ ಕ್ಲೀನ್ ಮಾಡದೆ ನಿರ್ಲಕ್ಷಿö್ಯಸಿರುವುದರಿಂದ ಗ್ರಾಮಸ್ಥರು ಸೊಳ್ಳೆ ಹಾಗೂ ದುರ್ನಾತದ ನರಕಯಾತನೆ ಅನುಭವಿಸುತ್ತಿದ್ದಾರೆ! ಇದು ಹುಳಿಯಾರು ಹೋಬಳಿಯ ಕಾರೆಹಳ್ಳಿ ಗ್ರಾಮದ ಇಂದಿನ ಕರುಣಾಜನಕ ಸ್ಥಿತಿ.
ಸಿಸ್ಟನ್‌ಗಳಿಂದ ನಿರಂತರವಾಗಿ ಪೋಲಾಗುತ್ತಿರುವ ನೀರೆಲ್ಲವೂ ಪಕ್ಕದ ಚರಂಡಿಯಲ್ಲಿ ಹೋಗಿ ಶೇಖರಣೆಯಾಗುತ್ತಿದೆ. ಕಾಲಕಾಲಕ್ಕೆ ಚರಂಡಿ ಸ್ವಚ್ಛಗೊಳಿಸಬೇಕಾದ ಗ್ರಾಮ ಪಂಚಾಯಿತಿ ಸಂಪೂರ್ಣ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದಾಗಿ ಹರಿದ ನೀರೆಲ್ಲಾ ಕೊಳೆತು, ಇಡೀ ಚರಂಡಿ ಕಲುಷಿತಗೊಂಡಿದೆ.
ಇದು ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದ್ದು, ನಿತ್ಯವೂ ಇಲ್ಲಿಗೆ ನೀರು ಹಿಡಿಯಲು ಬರುವ ಮಹಿಳೆಯರು, ಮಕ್ಕಳು ಸೊಳ್ಳೆಗಳ ಕಾಟದಿಂದ ಹೈರಾಣಾಗುತ್ತಿದ್ದಾರೆ. ಇನ್ನು ಚರಂಡಿ ಪಕ್ಕದಲ್ಲಿರುವ ಮನೆಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ದಿನಪೂರ್ತಿ ಬೀರುವ ದುರ್ನಾತ ಹಾಗೂ ಸೊಳ್ಳೆಗಳ ಕಾಟದಿಂದಾಗಿ ನಿವಾಸಿಗಳು ಮನೆಯಲ್ಲಿ ನೆಮ್ಮದಿಯಿಂದ ಕೂರದಂತಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನದೂಡುತ್ತಿದ್ದಾರೆ.
ಕಾರೆಹಳ್ಳಿ ಗ್ರಾಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಮನೆ ಮನೆ ಗಂಗೆ’ (ಜಲ ಜೀವನ್ ಮಿಷನ್) ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ಗ್ರಾಮದ ಪ್ರತಿಯೊಂದು ಕುಟುಂಬವೂ ಕುಡಿಯುವ ನೀರಿಗಾಗಿ ಇದೇ ಎರಡು ಸಿಸ್ಟನ್‌ಗಳನ್ನು ಅವಲಂಬಿಸಿದೆ. ಇಡೀ ಊರಿಗೆ ಆಸರೆಯಾಗಿರುವ ಈ ನೀರಿನ ಸಿಸ್ಟನ್‌ಗಳು ಕನಿಷ್ಠ ನಿರ್ವಹಣೆಯನ್ನೂ ಮಾಡದ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರುಘಂಟಿ ನಿತ್ಯ ನೀರು ವ್ಯರ್ಥವಾಗಿ ಹರಿಯುವುದನ್ನು ನೋಡುತ್ತಿದ್ದರೂ ಸಹ ನಲ್ಲಿಗಳನ್ನು ಕನಿಷ್ಟ ನಲ್ಲಿಗಳನ್ನು ಬದಲಾಯಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಕ್ಷಣವೇ ಸಿಸ್ಟನ್‌ಗಳಿಗೆ ಗುಣಮಟ್ಟದ ಹೊಸ ನಲ್ಲಿಗಳನ್ನು ಅಳವಡಿಸಿ ನೀರು ಪೋಲಾಗುವುದನ್ನು ತಡೆಯಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಕಾರೆಹಳ್ಳಿ ಗ್ರಾಮದ ಚರಂಡಿಗಳನ್ನು ಯುದ್ಧೋಪಾದಿಯಲ್ಲಿ ಸ್ವಚ್ಛಗೊಳಿಸಬೇಕು. ಗ್ರಾಮಕ್ಕೆ ಬಾಕಿ ಇರುವ ‘ಮನೆ ಮನೆ ಗಂಗೆ’ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕಿದೆ. ಇನ್ನಾದರೂ ಸಂಬAಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾರೆಹಳ್ಳಿ ಗ್ರಾಮದತ್ತ ಮುಖ ಮಾಡುವರೋ ಕಾದು ನೋಡಬೇಕಿದೆ.


