
ಹುಳಿಯಾರು: ಇಂದಿನ ಸಮಾಜದಲ್ಲಿ ಮಕ್ಕಳು ಹಠಕ್ಕೆ ಬಿದ್ದು ಪೋಷಕರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಪೋಷಕರು ದಿನಕ್ಕೆ ಕನಿಷ್ಠ ಹತ್ತು ನಿಮಿಷವಾದರೂ ದೇವರನ್ನು ಸ್ಮರಿಸುವುದರೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು ಎಂದು ಜ್ಞಾನಪ್ರಭು ಯಳನಾಡು ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಹುಳಿಯಾರು ಹೋಬಳಿ ಯಳನಡು ಮಠದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ‘ಹಳ್ಳಿಗೊಂದು ವಚನ ದೀಪ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರ ಮತ್ತು ಸಂಸ್ಕöÈತಿಯು ವ್ಯಕ್ತಿಯ ಜೀವನಕ್ಕೆ ಶಾಂತಿ, ನೆಮ್ಮದಿ ಹಾಗೂ ಸನ್ಮಾರ್ಗವನ್ನು ತೋರಿಸುತ್ತದೆ. ಮನೆಯಲ್ಲಿ ತಂದೆ-ತಾಯಿ ಪ್ರತಿನಿತ್ಯ ಮಾಡುವ ದೇವರ ಪೂಜೆ, ಗುರುವಿನ ಪೂಜೆ ಮತ್ತು ಅವರ ಕಾಯಕದ ಬದುಕನ್ನು ಮಕ್ಕಳು ಚಿಕ್ಕ ವಯಸ್ಸಿನಿಂದಲೇ ನೋಡುತ್ತಾ ಬೆಳೆದರೆ, ಅವರೂ ಅದನ್ನೇ ಅನುಕರಿಸುತ್ತಾರೆ.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೊನ್ನೇಬಾಗಿ ಬಸವರಾಜು ಮಾತನಾಡಿ, ತಾಲ್ಲೂಕಿನಲ್ಲಿ ಶರಣ ಪರಿಷತ್ತಿನ ವತಿಯಿಂದ ತಿಂಗಳಿಗೊಮ್ಮೆ ‘ಹಳ್ಳಿಗೊಂದು ವಚನ ದೀಪ’ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶರಣರ ತತ್ವಾದರ್ಶಗಳನ್ನು ಸಾರುವ ಮುಖ್ಯ ಉದ್ದೇಶ ಹೊಂದಿರುವ ಈ ಕಾರ್ಯಕ್ರಮವನ್ನು ಹಣಕಾಸಿನ ವ್ಯವಹಾರವಿಲ್ಲದೆ ಅತ್ಯಂತ ಸರಳವಾಗಿ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ಸಿ.ರವಿಕುಮಾರ್ ಅವರು ’ಶರಣರ ಆಂದೋಲನ’ದ ಕುರಿತು ಹಾಗೂ ಪ್ರೊ. ವಿ.ಡಿ.ಕಂಚಿರಾಯಸ್ವಾಮಿ ಅವರು ’ಹಡಪದ ಅಪ್ಪಣ್ಣ’ನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪರಿಷತ್ತಿನ ಖಜಾಂಚಿ ಸಿ.ಮಲ್ಲಿಕಾರ್ಜುನಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಮಠದ ಭಕ್ತರಾದ ನಿವೃತ್ತ ಉಪನ್ಯಾಸಕ ಶ್ರೀಕಂಠಮೂರ್ತಿ, ಪರಮೇಶ್ವರಯ್ಯ, ಸಿದ್ದರಾಮಣ್ಣ, ಟಿ.ಶಂಕರಯ್ಯ ಸೇರಿದಂತೆ ಸ್ಥಳೀಯ ಮೂರು ಭಜನಾ ಮಂಡಳಿಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


