ತುಮಕೂರು: ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ೨೦೨೩-೨೪ ರಿಂದ ೨೦೨೫-೨೬ನೇ ಸಾಲಿನವರೆಗೆ ವಿವಿಧ ಯೋಜನೆಗಳಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಫಲಾಪೇಕ್ಷಿಗಳ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆ ನಡೆಯಿತು.
ಸಭೆಯಲ್ಲಿ ನಿಗಮದ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ಯೋಜನೆ (೦.೫೦ ಲಕ್ಷ ಸಹಾಯಧನ), ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (೨.೦೦ ಲಕ್ಷ ಸಹಾಯಧನ), ಸ್ವಾವಲಂಬಿ ಸಾರಥಿ ಯೋಜನೆ (೪.೦೦ ಲಕ್ಷ ಸಹಾಯಧನ) ಹಾಗೂ ಲ್ಯಾಪ್‌ಟಾಪ್ ಯೋಜನೆಗಳಡಿ ಅರ್ಜಿ ಸಲ್ಲಿಸಿರುವ ಫಲಾಪೇಕ್ಷಿಗಳ ಅರ್ಜಿಗಳನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಶೀಲಿಸಲಾಯಿತು.
ಫಲಾನುಭವಿಗಳ ಆಯ್ಕೆಗೆ ಸಂಬAಧಿಸಿದ ಸಾಮಾನ್ಯ ಅರ್ಹತಾ ಷರತ್ತುಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಕನಿಷ್ಠ ೨೧ ವರ್ಷ ವಯಸ್ಸು ಹೊಂದಿರಬೇಕು. ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ೩ ಲಕ್ಷ ಹಾಗೂ ನಗರ ಪ್ರದೇಶದಲ್ಲಿ ೫ ಲಕ್ಷ ಮಿತಿಯೊಳಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮ ಅಥವಾ ಸರ್ಕಾರದಿಂದ ೧ ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸೌಲಭ್ಯವನ್ನು ಪಡೆದು ಕಳೆದ ಮೂರು ವರ್ಷಗಳೊಳಗೆ ಪ್ರಯೋಜನ ಪಡೆದಿದ್ದಲ್ಲಿ, ಪುನಃ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ. ಈ ಕುರಿತು ಸರ್ಕಾರದ ಮಾರ್ಗಸೂಚಿಗಳನ್ವಯ ಕ್ರಮ ವಹಿಸಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಅದೇ ರೀತಿ, ಪೌರಕಾರ್ಮಿಕರು ಮತ್ತು ಅವರ ಅವಲಂಬಿತ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ನಿಗಮದ ಸೌಲಭ್ಯವನ್ನು ನೀಡಲಾಗುವುದು. ನಗರಸಭೆ, ಪುರಸಭೆ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅಧಿಕೃತ ದಾಖಲೆ ಅಥವಾ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ. ಖಾಯಂ ಪೌರಕಾರ್ಮಿಕರು ಅಥವಾ ಸರ್ಕಾರಿ ನೌಕರರಾಗಿರುವ ಸ್ವಚ್ಛತಾ ಸಿಬ್ಬಂದಿ ನಿಗಮದ ವಿವಿಧ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ ಎಂಬುದನ್ನು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.
ಸರ್ಕಾರದ ಮಾರ್ಗಸೂಚಿಗಳು ಹಾಗೂ ಜಿಲ್ಲೆಗೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಅರ್ಹ ಫಲಾನುಭವಿಗಳನ್ನು ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ), ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಸದಸ್ಯರು ಹಾಗೂ ಸಂಬ0ಧಿತ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)