ಹುಳಿಯಾರು: ಪ್ರತಿಯೊಬ್ಬರ ಜೀವನದಲ್ಲೂ ಕಷ್ಟಪಟ್ಟು ಶ್ರಮವಹಿಸಿದರೆ ಎಂತಹ ಸವಾಲುಗಳನ್ನಾದರೂ ಮೆಟ್ಟಿ ನಿಲ್ಲಬಹುದು. ಕೇವಲ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ನನಸು ಮಾಡಿಕೊಳ್ಳಲು ದೃಢ ಸಂಕಲ್ಪ, ಶಿಸ್ತು ಮತ್ತು ಸಮರ್ಪಣಾ ಭಾವ ಅತ್ಯಗತ್ಯ” ಎಂದು ನೇತ್ರ ತಜ್ಞೆ ಹಾಗೂ ಹಿಮಾಲಯ ಪರ್ವತಾರೋಹಿ ಡಾ.ಚಿನ್ಮಯಿ ಕರೆ ನೀಡಿದರು.
ಹುಳಿಯಾರು ಹೋಬಳಿಯ ದೊಡ್ಡಬಿದರಿಯ ಜೆಸಿಎಂ ಇಂಟರ್ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ಸಂಸತ್ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಪ್ರೇರಣಾದಾಯಿಕವಾಗಿ ಮಾತನಾಡಿದರು.
ಹಿಮಾಲಯ ಪರ್ವತಾರೋಹಣದ ಅನುಭವ: ತಮ್ಮ ಹಿಮಾಲಯ ಪರ್ವತಾರೋಹಣದ ರೋಚಕ ಪಯಣವನ್ನು ನೆನಪಿಸಿಕೊಂಡ ಡಾ. ಚಿನ್ಮಯಿ, “ಪ್ರಥಮ ಬಾರಿಗೆ ಹಿಮಾಲಯ ಏರಲು ಹೊರಟಾಗ ನನಗೆ ಅಲ್ಲಿನ ಹವಾಮಾನದ ಬಗ್ಗೆ ಪೂರ್ಣ ಅರಿವಿರಲಿಲ್ಲ. ಆದರೆ ಸತತ ಪ್ರಯತ್ನ, ದೈಹಿಕ ಶಕ್ತಿ ಹಾಗೂ ಮುಖ್ಯವಾಗಿ ಮಾನಸಿಕ ಧೈರ್ಯ ನನ್ನನ್ನು ಹಿಮಾಲಯದ ತುತ್ತತುದಿಗೆ ಕರೆದೊಯ್ಯಿತು” ಎಂದರು. “ಸಾಧನೆಗೆ ವಯಸ್ಸು ಅಥವಾ ಲಿಂಗ ತಾರತಮ್ಯ ತಡೆಯಾಗುವುದಿಲ್ಲ. ವೈದ್ಯಕೀಯ ವೃತ್ತಿಯ ನಡುವೆಯೂ ದಿನಕ್ಕೆ ಒಂದೆರಡು ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡಿ ಈ ಸಾಧನೆ ಮಾಡಲು ಸಾಧ್ಯವಾಯಿತು” ಎಂದ0ರು.
ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಸಮಯ ಪ್ರಜ್ಞೆಯ ಪಾಠ: “ಬರಿ ಓದು ಒಂದೇ ಜೀವನವಲ್ಲ. ಕ್ರೀಡೆ, ಸಾಂಸ್ಕöÈತಿಕ ಚಟುವಟಿಕೆಗಳ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ದಿನಕ್ಕೆ ಎಲ್ಲರಿಗೂ ಸಿಗುವುದು ೨೪ ಗಂಟೆಗಳು ಮಾತ್ರ. ಆ ಸಮಯದಲ್ಲಿ ಓದಿಗೆ, ಆಟಕ್ಕೆ ಹಾಗೂ ಇತರೆ ಕೆಲಸಗಳಿಗೆ ಸರಿಯಾಗಿ ಸಮಯ ನಿರ್ವಹಣೆ ಮಾಡುವುದನ್ನು ಕಲಿತರೆ ಜೀವನದಲ್ಲಿ ಸೋಲಲು ಸಾಧ್ಯವಿಲ್ಲ” ಎಂದು ಕಿವಿಮಾತು ಹೇಳಿದರು.
ನಿವೃತ್ತ ಶಿಕ್ಷಕಿ ಸಿದ್ದಗಂಗಮ್ಮ ಅವರು ಮಾತನಾಡಿದರು. ಕೊಪ್ಪಳ ಜಿಲ್ಲೆಯ ಡಿಡಿಪಿಐ ಅನಂತಕುಮಾರ್ ಅವರು ಮಾತನಾಡಿದರು.
ಶಾಲೆಯ ಸಂಸ್ಥಾಪಕರಾದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ನಿವೃತ್ತ ಉಪನ್ಯಾಸಕ ಜೆ.ಬಿ.ಕೃಷ್ಣಮೂರ್ತಿ, ಪ್ರಾಂಶುಪಾಲರಾದ ರಮ್ಯಕುಮಾರಸ್ವಾಮಿ, ಆಡಳಿತಾಧಿಕಾರಿ ನಿಂಗಪ್ಪ, ತಾಪಂ ಮಾಜಿ ಸದಸ್ಯ ವಸಂತಯ್ಯ, ಬೋರೇಗೌಡ, ಎಚ್.ವಿನೂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
(Visited 1 times, 1 visits today)



