ಹುಳಿಯಾರು: ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ, ಯಾವುದೇ ಅಲೆದಾಟವಿಲ್ಲದೆ ಮನೆಬಾಗಿಲಿಗೇ ಉಚಿತವಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ವಿತರಿಸಲು ಮುಂದಾಗಿರುವುದು ಮೊದಲ ನೋಟಕ್ಕೆ ಅತ್ಯಂತ ಪ್ರಶಂಸನೀಯ ಹಾಗೂ ಸ್ವಾಗತಾರ್ಹ ಯೋಜನೆಯಂತೆ ಕಾಣುತ್ತದೆ. ಕಂದಾಯ ಕಚೇರಿಗಳು, ತಾಲೂಕು ಕೇಂದ್ರಗಳು ಮತ್ತು ನೆಮ್ಮದಿ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಸರತಿಯಲ್ಲಿ ನಿಂತು, ಸರ್ವರ್ ಸಮಸ್ಯೆಯಿಂದ ದಿನಗಟ್ಟಲೆ ಅಲೆದಾಡುತ್ತಿದ್ದ ಗ್ರಾಮೀಣ ಭಾಗದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದು ದೊಡ್ಡ ರಿಲೀಫ್ ನೀಡಬೇಕಿತ್ತು. ಆದರೆ, ಪ್ರಸ್ತುತ ಜಾರಿಯಲ್ಲಿರುವ ಈ ವಿತರಣಾ ವೈಖರಿ ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಬದಲು, ಬರೀ ಸರ್ಕಾರದ ಪ್ರಚಾರದ ಸರಕಾಗಿ ಬದಲಾಗಿದೆಯೇ ಎಂಬ ಬಲವಾದ ಅನುಮಾನ ಮೂಡಿಸುತ್ತಿದೆ.
ಹಳೆಯ ದಾಖಲೆಯೇ ಮರುಮುದ್ರಣ: ಸಾರ್ವಜನಿಕರಿಗೆ ಸಿಗದ ಸೌಲಭ್ಯ: ಇತ್ತೀಚೆಗೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆಗೆ ಸಂಬAಧಿಸಿದAತೆ ಮಹತ್ವದ ಆದೇಶ ಹಾಗೂ ಸುತ್ತೋಲೆಯನ್ನು ಹೊರಡಿಸಿದೆ. ಇದರನ್ವಯ, ಈ ಹಿಂದೆ ’ಆದಿ ಕರ್ನಾಟಕ’, ’ಆದಿ ದ್ರಾವಿಡ’ ಅಥವಾ ’ಆದಿ ಆಂಧ್ರ’ ಎಂದು ಜಾತಿ ಪ್ರಮಾಣಪತ್ರ ಪಡೆದಿದ್ದವರು, ತಮ್ಮ ಮೂಲ ಜಾತಿಯನ್ನು (ಉದಾಹರಣೆಗೆ: ಹೊಲೆಯ/ಮಾದಿಗ ಇತ್ಯಾದಿ) ನಮೂದಿಸಿ ಪ್ರವರ್ಗ ’ಎ’ ಅಥವಾ ಪ್ರವರ್ಗ ’ಬಿ’ ಅಡಿ ಹೊಸ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಸರ್ಕಾರಿ ಸೌಲಭ್ಯಗಳು, ಶೈಕ್ಷಣಿಕ ಪ್ರವೇಶಾತಿ ಹಾಗೂ ಮುಂಬರುವ ಎಸ್‌ಐಆರ್ ಸೇರಿದಂತೆ ವಿವಿಧ ಯೋಜನಾ ಅರ್ಹತೆಗಳಿಗೆ ಈ ನವೀಕೃತ ದಾಖಲೆ ಅತ್ಯಗತ್ಯವಾಗಿದೆ. ಆದರೆ, ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಬಾಗಿಲಿಗೆ ತಲುಪಿಸುತ್ತಿರುವ ಜಾತಿ ಪ್ರಮಾಣಪತ್ರಗಳು ಈ ಹೊಸ ಆದೇಶಕ್ಕೆ ಅನುಗುಣವಾಗಿಲ್ಲ! ಬದಲಾಗಿ, ಅನೇಕ ವರ್ಷಗಳ ಹಿಂದೆ ಮಾಡಿಸಿದ್ದ ಹಳೆಯ ಜಾತಿ ಪ್ರಮಾಣಪತ್ರಗಳನ್ನೇ ಯಥಾವತ್ತಾಗಿ ಪುನಃ ಮುದ್ರಿಸಿ ನೀಡಲಾಗುತ್ತಿದೆ.
ಉಪಯೋಗಕ್ಕೆ ಬಾರದ ದಾಖಲೆಯಿಂದ ಅರ್ಹರಿಗೆ ನಿರಾಶೆ: ಯಾವ ಪ್ರಮಾಣಪತ್ರದಿಂದ ಮೀಸಲಾತಿಯ ನೈಜ ಪ್ರಯೋಜನ ಸಿಗಬೇಕಿತ್ತೋ, ಆ ಹೊಸ ಮಾಹಿತಿಯೇ ಇಲ್ಲದ ಹಳೆಯ ಪತ್ರಗಳನ್ನು ಕೈಗಿಟ್ಟರೆ ಜನಸಾಮಾನ್ಯರಿಗೆ ಅದರಿಂದಾಗುವ ಲಾಭವಾದರೂ ಏನು? ಮನೆಬಾಗಿಲಿಗೆ ಬಂದ ದಾಖಲೆ ಉಪಯೋಗಕ್ಕೆ ಬಾರದೆ ಹೋದಾಗ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೊಸ ನಿಯಮದಂತೆ ಪ್ರಮಾಣಪತ್ರ ಪಡೆಯಲು ಮತ್ತೆ ತಾಲೂಕು ಕಚೇರಿಗಳಿಗೆ ಅಲೆದಾಡುವುದು ಅನಿವಾರ್ಯವಾಗಿದೆ. ಸರ್ಕಾರದ ನೂತನ ಆದೇಶದ ಲಾಭ ಪಡೆಯಲು ಮೂಲ ಜಾತಿಯ ಸ್ಪಷ್ಟ ನಮೂದು ಅಗತ್ಯವಿದ್ದು, ಹಳೆಯ ಮರುಮುದ್ರಿತ ಪತ್ರಗಳು ಒಳಮೀಸಲಾತಿಯ ಅನುಕೂಲ ಸೇರಿದಂತೆ ಶೈಕ್ಷಣಿಕ ಸೀಟು ಅಥವಾ ಸ್ಕಾಲರ್‌ಶಿಪ್ ಹಂತದಲ್ಲಿ ತಿರಸ್ಕöÈತಗೊಳ್ಳುವ ಭೀತಿ ಎದುರಾಗಿದೆ.
ಪ್ರಚಾರಕ್ಕಾಗಿ ಯೋಜನೆಯೋ ಅಥವಾ ಸಾರ್ವಜನಿಕರ ಹಿತಕ್ಕಾಗಿ ಅಭಿಯಾನವೋ?: ಸರ್ಕಾರ ನಿಜವಾಗಿಯೂ ಜನರ ಹಿತ ಬಯಸಿದ್ದರೆ, ನೂತನ ಒಳ ಮೀಸಲಾತಿ ಆದೇಶ ಹಾಗೂ ಕರಡು ನಿಯಮಗಳಿಗೆ ಪೂರಕವಾದ ಹೊಸ ವಿವರಗಳನ್ನು ಸಂಗ್ರಹಿಸಿ, ನವೀಕೃತ ಪ್ರಮಾಣಪತ್ರಗಳನ್ನು ಉಚಿತವಾಗಿ ನೀಡಬೇಕಿತ್ತು. ಅದನ್ನು ಬಿಟ್ಟು, ಯಾವುದೇ ಶೈಕ್ಷಣಿಕ ಅಥವಾ ಆಡಳಿತಾತ್ಮಕ ಪ್ರಯೋಜನಕ್ಕೆ ಬಾರದ ಹಳೆಯ ದಾಖಲೆಗಳನ್ನು ಮುದ್ರಿಸಿ ವಿತರಿಸುತ್ತಿರುವುದು ಬರೀ ’ದಾಖಲೆಯ ಮಟ್ಟದ ಪ್ರಚಾರ’ಕ್ಕೆ ಸೀಮಿತವಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಯೋಜನೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಿ ಹಳೆಯ ದಾಖಲೆಗಳನ್ನು ಮುದ್ರಿಸಿ ಹಂಚುವ ಬದಲು, ಹೊಸ ಆದೇಶಕ್ಕನುಗುಣವಾಗಿ ಪ್ರತಿಯೊಂದು ಕುಟುಂಬಕ್ಕೂ ಉಪಯುಕ್ತವಾಗುವ ಜಾತಿ ಪ್ರಮಾಣಪತ್ರ ವಿತರಿಸಿದರೆ ಮಾತ್ರ ಈ ಅಭಿಯಾನಕ್ಕೊಂದು ಅರ್ಥ ಸಿಗುತ್ತದೆ. ಸರ್ಕಾರ ತಕ್ಷಣವೇ ಈ ಪ್ರಮಾದವನ್ನು ಸರಿಪಡಿಸಿ, ಪ್ರಚಾರದ ಮೊರೆ ಹೋಗುವುದನ್ನು ಬಿಟ್ಟು ಸಾರ್ವಜನಿಕರಿಗೆ ನಿಜವಾದ ನೆರವು ನೀಡಲು ಕ್ರಮ ಕೈಗೊಳ್ಳಬೇಕಿದೆ.
(Visited 1 times, 1 visits today)