ತುಮಕೂರು: ನಗರದ ಶ್ರೀ ಕನ್ನಿಕಾ ಮಹಲ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತುಮಕೂರು ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪರಸ್ಪರ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನದ ಮಹತ್ವವನ್ನು ಸಾರಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಖ್ಯಾತ ಚಿಂತಕರು ಹಾಗೂ ಬರಹಗಾರರಾದ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ರಕ್ಷಾ ಬಂಧನ ಕೇವಲ ಸಹೋದರ-ಸಹೋದರಿಯರ ಬಾಂಧವ್ಯದ ಹಬ್ಬವಲ್ಲ. ದೇಶ ಹಾಗೂ ಧರ್ಮದ ರಕ್ಷಣೆಯ ಸಂಕಲ್ಪ ಮಾಡುವ ದಿನವಾಗಬೇಕು ಎಂದು ಕರೆ ನೀಡಿದರು.
ನವ ಭಾರತದ ಬೆಳವಣಿಗೆಯನ್ನು ಸಹಿಸದ ಶಕ್ತಿಗಳು ದೇಶದ ಗೌರವಕ್ಕೆ ಧಕ್ಕೆ ತರುವ ವ್ಯವಸ್ಥಿತ ಷಡ್ಯಂತ್ರಗಳನ್ನು ರೂಪಿಸುತ್ತಿವೆ ಎಂದು ಆರೋಪಿಸಿದ ಅವರು, ಇಂತಹ ಶಕ್ತಿಗಳ ವಿರುದ್ಧ ಯುವ ಸಮುದಾಯ ಎಚ್ಚೆತ್ತುಕೊಂಡು ಧ್ವನಿ ಎತ್ತಬೇಕು. ರಾಷ್ಟçದ ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಸ್. ಭಾಸ್ಕರ್ ವಹಿಸಿದ್ದರು. ವೇದಿಕೆಯಲ್ಲಿ ವಿಹಿಂಪ ವಿಭಾಗ ಪ್ರಮುಖ ಜಿ.ಕೆ. ಶ್ರೀನಿವಾಸ್, ವಿಭಾಗ ಬಜರಂಗದಳ ಸಂಯೋಜಕ ಕಿರಣ್ ಕನಕಪುರ, ಜಿಲ್ಲಾ ಬಜರಂಗದಳ ಸಂಯೋಜಕ ಜೀವನ್ ಹಾಗೂ ಜಿಲ್ಲಾ ದುರ್ಗಾ ವಾಹಿನಿ ಪ್ರಮುಖ ಓಂಕಾರೇಶ್ವರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಜರಂಗದಳದ ಕಾರ್ಯಕರ್ತರು, ನಗರದ ಗಣ್ಯರು ಹಾಗೂ ಮಾತೆಯರು ಸೇರಿದಂತೆ ೪೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
(Visited 1 times, 1 visits today)



