
ಪಾವಗಡ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯ ಕಟ್ಟಡ ಸೋರುತ್ತಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ವೈ.ಎನ್. ಹೊಸಕೋಟೆಯ ಪೊಲೀಸ್ ಠಾಣೆಯ ಕಟ್ಟಡದ ಸೀಲಿಂಗ್ ಹಲವು ಕಡೆಗಳಿಂದ ಸೋರುತ್ತಿದೆ. ಮಳೆ ನೀರು ಠಾಣೆಯ ಕೊಠಡಿಗಳಿಗೆ ನುಗ್ಗಿ ನೆಲದಲ್ಲಿ ಸಂಗ್ರಹವಾಗುತ್ತಿರುವುದರಿAದ ಸಿಬ್ಬಂದಿ ಕರ್ತವ್ಯ ನಿರ್ವಹಿಸುವುದೇ ಸವಾಲಾಗಿ ಪರಿಣಮಿಸಿದೆ.
ಕಟ್ಟಡದ ಗೋಡೆಗಳು ನಿರಂತರ ತೇವದಿಂದ ಹಾಳಾಗುತ್ತಿದ್ದು, ಕೆಲವು ಕಡೆ ಪ್ಲಾಸ್ಟರ್ ಕಿತ್ತು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರಿನಿಂದ ಪ್ರಮುಖ ದಾಖಲೆಗಳು, ಎಫ್‌ಐಆರ್ ಪುಸ್ತಕಗಳು ಹಾಗೂ ಕಂಪ್ಯೂಟರ್ ಸೇರಿದಂತೆ ಕಚೇರಿ ಪರಿಕರಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ. ದಾಖಲೆಗಳು ಮತ್ತು ಎಲೆಕ್ಟಾçನಿಕ್ ಉಪಕರಣಗಳನ್ನು ಪ್ಲಾಸ್ಟಿಕ್ ಕವರ್‌ಗಳಿಂದ ಮುಚ್ಚಿ ರಕ್ಷಿಸಿಕೊಳ್ಳುವ ಪರಿಸ್ಥಿತಿ ಸಿಬ್ಬಂದಿಗೆ ಎದುರಾಗಿದೆ.
ಮಳೆ ಸುರಿಯುವ ಸಂದರ್ಭದಲ್ಲಿ ಠಾಣೆಯೊಳಗೆ ನೀರು ನುಗ್ಗುವುದರಿಂದ ದೂರು ನೀಡಲು ಆಗಮಿಸುವ ಸಾರ್ವಜನಿಕರೂ ತೊಂದರೆ ಅನುಭವಿಸುತ್ತಿದ್ದಾರೆ. ಕರ್ತವ್ಯದಲ್ಲಿರುವ ಸಿಬ್ಬಂದಿ ಕೆಲವೆಡೆ ಕೊಡೆ ಹಿಡಿದು ಕುಳಿತು ಕೆಲಸ ನಿರ್ವಹಿಸುವಂತಾಗಿದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಿಶ್ರಾಂತಿ ಪಡೆಯಲು ಕೂಡ ಸೂಕ್ತ ಸ್ಥಳಾವಕಾಶವಿಲ್ಲದಂತಾಗಿದೆ.
ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸಬೇಕಾದ ಪೊಲೀಸ್ ಠಾಣೆಯೇ ಇಂತಹ ದುಸ್ಥಿತಿಯಲ್ಲಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಕೂಡಲೇ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ ತುರ್ತು ದುರಸ್ತಿ ಕೈಗೊಳ್ಳುವುದರ ಜೊತೆಗೆ, ದೀರ್ಘಾವಧಿಗೆ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



