ಹುಳಿಯಾರು: ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಾದ್ಯಂತ ಭಾನುವಾರ ಮತ್ತು ಸೋಮವಾರ ಅಮಾವಾಸ್ಯೆಯ ಪ್ರಯುಕ್ತ ಲಕ್ಷ್ಮಿ ಪೂಜೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಈ ಬಾರಿ ಅಮಾವಾಸ್ಯೆ ಎರಡು ದಿನ ಬಂದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಪಟ್ಟಣದ ವ್ಯಾಪಾರ ವಹಿವಾಟಿನ ಕೇಂದ್ರಗಳಲ್ಲಿ ಹಬ್ಬದ ಕಳೆ ಮನೆಮಾಡಿತ್ತು. ಅಂಗಡಿ ಮುಂಗಟ್ಟುಗಳನ್ನು ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ ಹಾಗೂ ತಳಿರು ತೋರಣಗಳಿಂದ ಸಿಂಗರಿಸಿ ವ್ಯಾಪಾರಸ್ಥರು ಶ್ರದ್ಧಾಭಕ್ತಿಯಿಂದ ಲಕ್ಷ್ಮಿ ಪೂಜೆ ನೆರವೇರಿಸಿದರು.
ಅಂಗಡಿಗಳಲ್ಲಿ ಲಕ್ಷ್ಮಿದೇವಿಯ ಫೋಟೊ ಇಟ್ಟು ಹಾಗೂ ಕಲಶ ಪ್ರತಿಷ್ಠಾಪಿಸಿ, ಹಣದ ನೋಟುಗಳಿಟ್ಟು ಮತ್ತು ವಿವಿಧ ವಸ್ತುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ವ್ಯಾಪಾರಸ್ಥರು ಹೊಸ ಬಟ್ಟೆಗಳನ್ನು ಧರಿಸಿ, ಚಿನ್ನಾಭರಣಗಳನ್ನು ತೊಟ್ಟು ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ಬಳಿಕ ಅಕ್ಕಪಕ್ಕದ ಅಂಗಡಿಯವರು, ಸ್ನೇಹಿತರು ಹಾಗೂ ಗ್ರಾಹಕರಿಗೆ ಸಿಹಿ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಚಿನ್ನಾಭರಣ ಮಳಿಗೆಗಳಲ್ಲಿ ವಿಶೇಷ ಸಂಭ್ರಮ ಕಂಡುಬಂದಿತು. ಸಮೃದ್ಧಿ ಮತ್ತು ಐಶ್ವರ್ಯದ ಸಂಕೇತವಾಗಿ ಚಿನ್ನವನ್ನು ಪರಿಗಣಿಸುವುದರಿಂದ ದೀಪಾವಳಿ ಹಾಗೂ ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನ ಖರೀದಿಸುವುದು ವಾಡಿಕೆಯಾಗಿದೆ. ಅದರಂತೆ ಬೆಲೆ ಏರಿಕೆಯ ನಡುವೆಯೂ ಈ ಬಾರಿ ಗ್ರಾಹಕರು ಚಿನ್ನಾಭರಣ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದರು.
ಒಟ್ಟಾರೆ, ದೀಪಾವಳಿ ಹಬ್ಬದ ಪ್ರಯುಕ್ತ ಹುಳಿಯಾರು ಪಟ್ಟಣದಾದ್ಯಂತ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಧಾರ್ಮಿಕ ಶ್ರದ್ಧೆ, ಸಡಗರ ಹಾಗೂ ವ್ಯಾಪಾರ ಚಟುವಟಿಕೆಗಳು ಒಟ್ಟಾಗಿ ಹಬ್ಬದ ವಾತಾವರಣವನ್ನು ಮತ್ತಷ್ಟು ಕಳೆಗಟ್ಟಿಸಿದವು.
(Visited 1 times, 1 visits today)



