ತುಮಕೂರು: ಕನ್ನಡ ಸಾಹಿತ್ಯ ಪರಿಷತ್ ಮತ್ತು ಅಮರಜ್ಯೋತಿ ಸಾಂಸ್ಕøತಿಕ ಟ್ರಸ್ಟ್‍ನ ದಿಬ್ಬೂರು ಮಂಜಣ್ಣ ಅವರು ಒಗ್ಗೂಡಿ, ನಮ್ಮಿಂದ ಮರೆಯಾಗಿರುವ ಅಬಿಜಾತ ಕಲಾವಿಧೆ ಮಂಜುಳ ಅವರ ಸವಿನೆನಪಿನಲ್ಲಿ ಕಾರ್ಯಕ್ರಮ ರೂಪಿಸುವ ಮೂಲಕ ಅವರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಅಮರಜ್ಯೋತಿ ಸಾಂಸ್ಕøತಿಕ ಟ್ರಸ್ಟ(ರಿ) ದಿಬ್ಬೂರು ಅವರು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಮಂಜುಳ ಅವರ ಸಂಸ್ಮರಣೆ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು, ಅವರ ಸಾವನ್ನಪ್ಪಿಯೇ 40 ವರ್ಷಗಳು ಕಳೆಯುತ್ತಿರುವ ಈ ಕಾಲದಲ್ಲಿ ಅವರನ್ನು ನೆನಪು ಮಾಡಿಕೊಂಡು, ಅವರ ನಟಿಸಿದ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಅವರ ನೆನಪು ಮರುಕಳುಹಿಸುವಂತೆ ಮಾಡಿದ್ದಾರೆ. ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಕುಟುಂಬದ ಕುಡಿಗೆ ಗೌರವ ಸಲ್ಲಿಸಿ, ನೆನಪುಗಳನ್ನು ಮೆಲುಕು ಹಾಕಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ ಎಂದರು.
ಮಂಜುಳ ಅವರ ಕುರಿತು ಮಾತನಾಡಿದ ಕಲಾಶ್ರೀ ಡಾ.ಲಕ್ಷ್ಮಣದಾಸ್, ಕೇವಲ 10 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ನಾನೊಬ್ಬ ಸಮರ್ಥ ಕಲಾವಿಧೆ ಎಂಬುದನ್ನು ತೋರಿಸಿಕೊಟ್ಟ ಮಂಜುಳ ತುಮಕೂರಿನವರು ಎಂಬುದು ಹೆಮ್ಮೆಯ ವಿಚಾರ. ಗುಬ್ಬಿ ವೀರಣ್ಣ ನಾಟಕ ಕಂಪನಿಯ ನೃತ್ಯದ ಕೋರಿಯೋಗ್ರಾಫರ್ ಆಗಿದ್ದ ನಾಟ್ಯಶ್ರೀ ರಾಮನ್ ಅವರಿಂದ ಭರತನಾಟ್ಯ ಕಲಿತು, ಡಾ.ರಾಜಕುಮಾರ್, ಶ್ರೀನಾಥ್, ವಿಷ್ಣುವರ್ಧನ್, ಶಂಕರ್ ನಾಗ್, ಪ್ರಭಾಕರ್ ಸೇರಿದಂತೆ ಕನ್ನಡ ಚಲನಚಿತ್ರಗಳೇ ಅಲ್ಲದೆ, ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಮಂಜುಳ, ಕಲೆಯನ್ನು ಕರಗತ ಮಾಡಿಕೊಂಡವರು. ಶ್ರೀನಾಥ್ ಅವರಿಗೆ ಪ್ರಣಯರಾಜ ಎಂದು ಹೆಸರು ಬಂದಿದ್ದರೆ, ಆದಕ್ಕೆ ಕಾರಣ ಮಂಜುಳ ಮತ್ತು ಶ್ರೀನಾಥ ನಟಿಸಿದ 30ಕ್ಕೂ ಹೆಚ್ಚು ಚಿತ್ರಗಳು ಕಾರಣ. ಹೀರೋಗೆ ಸರಿಸಮನಾಗಿ ನಟಿಸುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದ್ದ ಮಂಜುಳ, ಕ್ಲಾಸ್ ಅಡಿಯನ್ಸ್‍ನಿಂದ ಮಾಸ್ ಆಡಿಯನ್ಸ್ ವರೆಗೂ ತಲುಪುತಿದ್ದ ಕಲಾವಿಧೆ. ಇಂತಹ ಕಲಾವಿಧೆಯ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸುವ ಮೂಲಕ ದಿಬ್ಬೂರು ಮಂಜು, ಇಡೀ ಕನ್ನಡ ಚಿತ್ರರಂಗವನ್ನೇ ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿದ್ದಾರೆ. ಅವರಿಗೆ ಮಂಜುಳ ಅಭಿಮಾನಿಗಳ ಪರವಾಗಿ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮಂಜುಳ ಅವರ ಜೀವನ ಕುರಿತು ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಆರ್.ಲೀಲಾವತಿ, 1954ರಲ್ಲಿ ಹುಟ್ಟಿದ ಮಂಜುಳ, 11ನೇ ವಯಸ್ಸಿನಲ್ಲಿಯೇ ಮನೆಕಟ್ಟಿ ನೋಡು ಚಲನಚಿತ್ರದ ಮೂಲಕ ಬಾಲ ಕಲಾವಿಧೆಯಾಗಿ ಚಿತ್ರರಂಗ ಪ್ರವೇಶಿಸಿ, ಕೇವಲ 10 ವರ್ಷಗಳಲ್ಲಿ 100 ಚಲನಚಿತ್ರಗಳಲ್ಲಿ ನಟಿಸಿದ ಏಕೈಕ ಕಲಾವಿದೆ. ಡಾ.ರಾಜ್‍ಕುಮಾರ್ ಅವರೊಂದಿಗೆ ನಟಿಸಿದ ಎರಡು ಕನಸು ಇಂದಿಗೂ ಮರೆಯದ ಸಿನಿಮಾ. ಮೂರುವೆರೆ ವಜ್ರ, ಮಯೂರ, ಗುರು ಶಿಷ್ಯರು ಹೀಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿ, ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ಸೆಳೆದವರು. ಅಂತಹ ಕಲಾವಿಧೆಯ ಕುರಿತ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿ ಉಪಾಧ್ಯಕ್ಷರಾದ ಟಿ.ಹೆಚ್.ಪ್ರಸನ್ನ ಕುಮಾರ್, ವೀರಭದ್ರೇಶ್ವರ್ ಡ್ರೈವಿಂಗ್ ಸ್ಕೂಲ್ ಮಾಲೀಕರಾದ ಹೆಚ್.ಆರ್.ನಾಗೇಶ್, ಮಂಜುಳ ಅವರ ಸಹೋದರರಾದ ನೀಲಕಂಠ, ಶ್ರೀಮತಿ ಮಮತ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಕಲಾಶ್ರೀ ಬಿ.ಎಸ್.ಶ್ರೀನಿವಾಸ ಮೂರ್ತಿ, ಸುಬ್ಬನಹಳ್ಳಿ ರಾಜು, ಶಂಕರ್ ಭಾರತೀಪುರ ಅವರುಗಳನ್ನು ಸನ್ಮಾನಿಸಲಾಯಿತು. ಅಮರಜ್ಯೋತಿ ಸಾಂಸ್ಕøತಿಕ ಟ್ರಸ್ಟ್(ರಿ)ನ ದಿಬ್ಬೂರು ಮಂಜು ಮತ್ತು ತಂಡದಿಂದ ಮಂಜುಳ ಅವರು ನಟಿಸಿದ ಚಲನಚಿತ್ರ ಗೀತೆಗಳ ಗಾಯನ ನಡೆಯಿತು. ಕಲಾವಿದರಾದ ವಿಷ್ಣುರಾಮನ್, ಶ್ರೀಮತಿ ದಾಕ್ಷಾಯಿಣಿ ಅವರುಗಳು ಗೀತೆಗಳನ್ನು ಹಾಡಿದರು.

(Visited 1 times, 1 visits today)