ತುಮಕೂರು: ಮುಂಗಾರು ಮಳೆ ಕೊರತೆ, ಶುಷ್ಕ ವಾತಾವರಣ, ತೇವಾಂಶ ಕಡಿಮೆ, ಬಿತ್ತನೆ ಕಾರ್ಯ ಕುಂಠಿತ, ಮತ್ತಿತರ ಕಾರಣಗಳಿಂದ ಜಿಲ್ಲೆಯಲ್ಲಿ ಈವರೆಗೂ ೧೫೯ ಕೋಟಿ ರೂ.ಗಳಷ್ಟು ಬೆಳೆ ನಷ್ಟ ಉಂಟಾಗಿದೆ ಎಂದು ಜಿಲ್ಲೆಯ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಬಂದಿದ್ದ ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವರಿಕೆ ಮಾಡಿಕೊಟ್ಟರು. ಜಿಲ್ಲಾ ಪಂಚಾಯತಿಯಲ್ಲಿAದು ಜರುಗಿದ ಅಧಿಕಾರಿಗಳ ಸಭೆಯಲ್ಲಿ ತಂಡಕ್ಕೆ ಮಾಹಿತಿ ನೀಡುತ್ತಾ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ೧೦ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ ನೈರುತ್ಯ ಪ್ರಮುಖ ಮಳೆ ಅವಧಿಯಾದ ಜೂನ್ ಮಾಹೆಯಿಂದ ಸೆಪ್ಟೆಂಬರ್‌ವರೆಗೆ ವಾಡಿಕೆಯಂತೆ ೩೪೮ ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ೧೮೪ ಮಿ.ಮೀ. ಮಾತ್ರ ಮಳೆಯಾಗಿದೆ. ಇದರಿಂದ ಶೇ.೪೭ರಷ್ಟು ಮಳೆ ಕೊರತೆ ಉಂಟಾಗಿದೆ. ಪ್ರಮುಖ ಬಿತ್ತನೆ ಅವಧಿಯಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಇಳುವರಿ ಬಂದಿಲ್ಲ ಎಂದು ಅವರು ತಂಡಕ್ಕೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸುಮಾರು ೫,೧೫,೬೦೩ ರೈತರಿದ್ದಾರೆ. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ವಾಡಿಕೆ ಬಿತ್ತನೆ ವಿಸ್ತೀರ್ಣ ೩,೧೧,೬೫೭ ಹೆಕ್ಟೇರ್ ಇದ್ದು, ಮಳೆ ಕೊರತೆಯಿಂದ ೨,೧೯,೯೩೫ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಬಿತ್ತನೆ ಕಾರ್ಯವು ಶೇ.೭೨ರಷ್ಟು ಆಗಿದ್ದರೂ ಅನಾವೃಷ್ಟಿಯಿಂದ ಬೆಳೆಗಳು ಬಾಡಿವೆ. ಸಕಾಲದಲ್ಲಿ ಹೂ ಬಿಡದೆ ಕಾಳು ಕಟ್ಟುತ್ತಿಲ್ಲ. ರಾಗಿ, ಶೇಂಗಾ ಸೇರಿದಂತೆ ಪ್ರಮುಖ ಬೆಳೆಗಳ ಇಳುವರಿ ಮೇಲೆ ಬರದ ಪರಿಣಾಮ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು ೧,೯೨,೧೨೮ ಹೆಕ್ಟೇರ್ ಬೆಳೆ ಹಾನಿ ಉಂಟಾಗಿರುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಬರ ಪರಿಸ್ಥಿತಿಯ ಕುರಿತು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಬೆಳೆ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದ್ದಾರೆ. ಬೆಳೆ ಹಾನಿ, ಇಳುವರಿ ಕುಂಠಿತವಾಗಿರುವುದು, ಕುಡಿಯುವ ನೀರಿನ ಸಮಸ್ಯೆ ಹಾಗೂ ಬೋರ್‌ವೆಲ್‌ಗಳಲ್ಲಿ ನೀರು ಲಭ್ಯವಾಗದಿರುವ ಪರಿಸ್ಥಿತಿಯನ್ನು ತಂಡಕ್ಕೆ ಮನದಟ್ಟು ಮಾಡಿದರು.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು, ಎನ್‌ಐಟಿಐ ಆಯೋಗದ . ಅಮರಿಂದರ್ ಸಿಂಗ್ ಹಾಗೂ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ ನಿರ್ದೇಶಕ ಡಾ: ಜೆ. ಹರ್ಷ ಸೇರಿದಂತೆ ಇತರೆ ಸದಸ್ಯರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.

(Visited 1 times, 1 visits today)