ಹುಳಿಯಾರು: ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಶಿಸ್ತು, ದೃಢತೆ ಹಾಗೂ ಸಮರ್ಪಣೆ ಎಂಬ `೩ಡಿ ಗುಣಗಳು ಸಹಜವಾಗಿ ಬೆಳೆದು ಬರುತ್ತವೆ. ಕ್ರೀಡೆಯಲ್ಲಿ ಗೆಲುವು?ಸೋಲನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ, ಸೋತಾಗ ಕುಗ್ಗದೆ ಗೆಲುವಿಗಾಗಿ ಮತ್ತಷ್ಟು ಪರಿಶ್ರಮಿಸಬೇಕು ಎಂದು ತಹಶೀಲ್ದಾರ್ ಮಮತಾ ಹೇಳಿದರು.
ಹುಳಿಯಾರಿನ ಕೆಪಿಎಸ್ ಹುಳಿಯಾರು?ಕೆಂಕೆರೆ ಶಾಲೆಯಲ್ಲಿ ೨೦೨೬?೨೭ನೇ ಸಾಲಿನ ತುಮಕೂರು (ದಕ್ಷಿಣ) ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಮಮತಾ ಅವರು ಕ್ರೀಡಾಜ್ಯೋತಿಯನ್ನು ಸ್ವೀಕರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡೆಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಖಾಸಗಿ ಶಾಲೆಗಳಲ್ಲಿ ಮೈದಾನ ಹಾಗೂ ಸ್ಥಳಾವಕಾಶದ ಕೊರತೆ ಎದುರಾಗುತ್ತಿದ್ದರೂ, ಸರ್ಕಾರಿ ಶಾಲೆಗಳು ಇಂದಿಗೂ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡುವ ಮಕ್ಕಳು ಮುಂದಿನ ದಿನಗಳಲ್ಲಿ ಜೀವನದ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಹಿಂದೆ ಬೀಳುವುದಿಲ್ಲ. ಶಿಸ್ತು, ದೃಢತೆ?ಛಲ, ಹಾಗೂ ಸಮರ್ಪಣೆ ಎಂಬ ಮೂರು ಗುಣಗಳು ಕ್ರೀಡೆಯಿಂದ ಮಕ್ಕಳಲ್ಲಿ ಬೆಳೆದು ಬರುತ್ತವೆ. ಗುರಿ ಸಾಧಿಸಲು ಸಮಯ ಹಾಗೂ ಶ್ರಮವನ್ನು ಮೀಸಲಿಡುವ ಮನೋಭಾವ ಕ್ರೀಡೆಯಿಂದ ರೂಪುಗೊಳ್ಳುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ ಯಾವುದೇ ಸಾಧನೆ ಸುಲಭವಾಗಿ ದೊರೆಯುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುವುದು, ಶ್ರದ್ಧೆ ಹಾಗೂ ಸಮರ್ಪಣೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯ. ಕಬಡ್ಡಿ ಆಕ್ರಮಣಕಾರಿ ಕ್ರೀಡೆಯಾಗಿರುವುದರಿಂದ ಆಟಗಾರರು ಸೌಮ್ಯತೆ ಹಾಗೂ ಕ್ರೀಡಾ ಮನೋಭಾವದಿಂದ ಆಟವಾಡಬೇಕು. ನಿರ್ಣಾಯಕರು ಯಾವುದೇ ಪಕ್ಷಪಾತವಿಲ್ಲದೆ ನಿಷ್ಪಕ್ಷಪಾತ ತೀರ್ಪು ನೀಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹುಳಿಯಾರು?ಕೆಂಕೆರೆ ಕೆಪಿಎಸ್ ಶಾಲೆಯ ಪ್ರಾಂಶುಪಾಲ ಕೃಷ್ಣಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಪಂ ವ್ಯವಸ್ಥಾಪಕ ಬಸವರಾಜು, ಚಿಕ್ಕನಾಯಕನಹಳ್ಳಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ್, ತಾಲೂಕು ಅಕ್ಷರ ದಾಸೋಹದ ನಿವೃತ್ತ ನಿರ್ದೇಶಕ ಗವಿರಂಗಯ್ಯ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈಶ್ವರಯ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಣ್ಣ, ಬಿಆರ್‌ಸಿ ಕುಮಾರಸ್ವಾಮಿ, ಇಸಿ ಪ್ರಕಾಶ್, ತಿಪಟೂರು ಟಿಪಿಇಒ ವೇದ, ತುರುವೇಕೆರೆ ಟಿಪಿಇಒ ದಾಕ್ಷಾಯಿಣಿ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

(Visited 1 times, 1 visits today)