ಪಾವಗಡ: ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಹಾರ ಕಲಬೆರಕೆ ತಡೆಗಟ್ಟುವ ನಿಟ್ಟಿನಲ್ಲಿ ತಹಸೀಲ್ದಾರ್ ವೈ. ರವಿ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಸಂಜೆ ಬಸ್ ನಿಲ್ದಾಣದ ಸುತ್ತಮುತ್ತಲಿನ ಹಣ್ಣು ಮಂಡಿಗಳು ಹಾಗೂ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ರಾಸಾಯನಿಕ ಪದಾರ್ಥಗಳನ್ನು ಬಳಸಲಾಗುತ್ತಿದೆ ಹಾಗೂ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಕೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಣ್ಣುಗಳ ಸಂಗ್ರಹಣೆ, ಸ್ವಚ್ಛತೆ ಹಾಗೂ ವ್ಯಾಪಾರಸ್ಥರು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದರು.
ಈ ವೇಳೆ ಕೆಲವು ಹಣ್ಣುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಹಣ್ಣುಗಳಿಗೆ ರಾಸಾಯನಿಕ ಬಳಕೆ ಮಾಡಲಾಗಿದೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಹಾರ ಪದಾರ್ಥಗಳಲ್ಲಿ ಯಾವುದೇ ಕೃತಕ ಬಣ್ಣ ಅಥವಾ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಬಾರದು. ಮಂಡಿಗಳು ಹಾಗೂ ಅಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ವೈ. ರವಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್, ಹಿರಿಯ ಆರೋಗ್ಯ ನಿರೀಕ್ಷಕ ಶಂಸುದ್ದೀನ್, ಕಸಬಾ ಆರ್‌ಐ ರಾಜಗೋಪಾಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

(Visited 1 times, 1 visits today)