ತುಮಕೂರು: ಅಕ್ಷರ ಜ್ಞಾನದಿಂದ ದೂರವಿದ್ದ ಸಮಾಜದ ಕೆಳಸ್ತರದ ವ್ಯಕ್ತಿಯೊಬ್ಬ ತನ್ನ ಬೇಟೆಗಾರಿಕೆ ವೃತ್ತಿಯನ್ನು ತೊರೆದು ಸತತ ಪರಿಶ್ರಮ ಏಕಾಗ್ರತೆಯನ್ನು ಸಾಧಿಸಿಕೊಂಡು ರಾಮಾಯಣದಂತಹ ಮಹಾಕಾವ್ಯವನ್ನು ದೇಶಕ್ಕೆ ನೀಡಿದ ಮೊಟ್ಟಮೊದಲ ಕವಿ ಮಹರ್ಷಿ ವಾಲ್ಮೀಕಿ. ಆತ ಶೋಷಿತರ ವಿಕಾಸದ ಅರಿವಿನ ಜ್ಯೋತಿಯಾಗಿದ್ದಾರೆ ಎಂದು ತುಮಕೂರು ನಗರದ ಜನಪ್ರಿಯ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ನುಡಿದರು. ಅವರು ನಗರದ ಕನ್ನಡಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಪ್ರಾಚೀನ ಕಾಲದ ವಚನಕಾರರು ಧರ್ಮದ ವ್ಯವಸ್ಥೆಯಲ್ಲಿ ವಿದ್ಯೆ ವಿವೇಕದಿಂದ ವಂಚಿತರಾದ ಸಮುದಾಯವೊಂದರಲ್ಲಿ ಜನಿಸಿದ ಬೇಡನೊಬ್ಬ ಮಹಾಕವಿಯಾಗಿ ಭಾರತದ ಆದಿಕವಿಯಾಗುವ ಮೂಲಕ ಈ ದೇಶದ ಮೊದಲ ಮಹಾಕಾವ್ಯದ ವಾರಸುದಾರಿಕೆ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ಆತನ ಹೆಸರನ್ನೇ ಹೊತ್ತ ಸಮುದಾಯವೊಂದು ಭರತ ಖಂಡದಲ್ಲಿರುವುದು ವಿಶಿಷ್ಟ ಸಂಗತಿಯಾಗಿದೆ ಎಂದರು.
ವಾಲ್ಮೀಕಿ ಈ ಜಗತ್ತಿಗೆ ರಾಮಾಯಣದಂತಹ ಉತ್ಕøಷ್ಟ ಪರಮೋತ್ಕøಷ್ಟ ಕೃತಿಯನ್ನು ಕೊಟ್ಟ ಶ್ರೇಷ್ಠ ದಾರ್ಶನಿಕ. ಲೇಖನಿ ಹಿಡಿದರೆ ವಾಲ್ಮೀಕಿ ಬಿಲ್ಲು ಹಿಡಿದರೆ ಏಕಲವ್ಯ ಎಂಬಂತೆ ಪಾಳೆಯಪಟ್ಟುಗಳ ಸೃಷ್ಟಿಗೆ ಉತ್ತಮ ಆಡಳಿತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು ಮಹರ್ಷಿ ವಾಲ್ಮೀಕಿ ಜನಾಂಗದವರೇ ಆಗಿದ್ದಾರೆ.
ಮುನುಕುಲದ ಇತಿಹಾಸವನ್ನು ತನ್ನ ಕಾವ್ಯದ ಒಡಲೊಳಗೆ ತುಂಬಿ ಮಾನವ ಚರಿತ್ರೆಯನ್ನು ರೂಪಕಗಳಲ್ಲಿ ಜಗತ್ತಿಗೆ ನೀಡಿದ ದಿಗ್ದರ್ಶಕ ಮಹರ್ಷಿಯ ರಾಮಾಯಣ ಕೃತಿಯು ಜಗತ್ತಿನ 50 ಭಾಷೆಗಳಿಗೆ ಅನುವಾದವಾಗಿರುವುದಲ್ಲೆ ಅದರ ಆಧಾರದ ಮೇಲೆ 300ಕ್ಕೂ ಹೆಚ್ಚು ರಾಮಾಯಣಗಳು ರಚಿತವಾದ ಏಕೈಕ ಮಹಾಕಾವ್ಯ ಎಂದ ಅವರು ರಾಮಾಯಣ ಮಾನವ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಅರ ಕುರುಹುಗಳು ದೇಶಾದ್ಯಂತ ಇರುವುದು ಅವುಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದರೆ ಭಾರತೀಯ ಸಂಸ್ಕøತಿಯ ಅನಾವರಣವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪನವರು ಮಾತನಾಡಿ ಮಹರ್ಷಿ ವಾಲ್ಮೀಕಿಯ ರಾಮಾಯಣ ಜಗತ್ತಿನ ಮಹಾಕಾವ್ಯಗಳ ಆದಿಮೂಲ. ವಿಶ್ವಪರಂಪರೆಯ ಮಾನವ ಬದುಕಿನ ತಳಮೂಲ ಸಂಸ್ಕøತಿಗೆ ಭದ್ರವಾದ ಬುನಾದಿ ಆಗಿದೆ. ಭಾರತೀಯರ ನರನಾಡಿಗಳಲ್ಲಿ ಹಾಸುಹೊಕ್ಕಾಗಿರುವ ಆತನ ರಾಮಾಯಣ ನಾಟಕ ರಂಗಭೂಮಿಯ ಮೇಲೆ ಭಿನ್ನ ಭಿನ್ನವಾಗಿ ನಿರೂಪಿಸಲ್ಪಟ್ಟು ಜನಪ್ರಿಯತೆಯು ತುತ್ತತುದಿಯನ್ನು ತಲುಪಿದೆ ಎಂದರು.
ವಾಲ್ಮೀಕಿ ರಾಮಾಯಣವು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿಂದ ಕೂಡಿದ್ದು ಸಂಸ್ಕøತದಲ್ಲಿ ರಚನೆಯಾಗಿದೆ. ಅದನ್ನು ಸರಳೀಕರಿಸಿ ಕುವೆಂಪುರವರು ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿ ಕನ್ನಡಿಗರಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದ ಅವರು ಮನುಕುಲ ಇರುವವರೆಗೂ ವಾಲ್ಮೀಕಿ ತನ್ನ ಕಾವ್ಯದ ಮೂಲಕ ಜೀವಂತವಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ. ಸಣ್ಣಹೊನ್ನಯ್ಯ ಕಂಟಲಗೆರೆ, ಜಿ.ಹೆಚ್.ಮಹದೇವಪ್ಪ, ಎಸ್.ಯೋಗಾನಂದ, ಚಿಕ್ಕಬೆಳ್ಳಾವಿ ಶಿವಕುಮಾರ್, ರಾಜಶೇಕರಯ್ಯ, ಕೆಂಕೆರೆ ಮಲ್ಲಿಕಾರ್ಜುನ್ ಇನ್ನು ಮುಂತಾದವರು ಹಾಜರಿದ್ದರು.

(Visited 1 times, 1 visits today)