ಕೊರಟಗೆರೆ: ತುರುವೇಕೆರೆ ತಾಲ್ಲೂಕಿನ ತಾಳೆಕೆರೆ ಗ್ರಾಮದ ದಲಿತ ರೈತ ಕುಟುಂಬದ ಜಮೀನು ಅಕ್ರಮ ಹರಾಜು ಖಂಡಿಸಿ, ನ.2 ರಂದು ತುರುವೇಕೆರೆ ಕರ್ನಾಟಕ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ ತಿಳಿಸಿದರು.
ಕೊರಟಗೆರೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 4 ಕೋಟಿ ಬೆಲೆಯ 4.14 ಎಕರೆ ಜಮೀನನ್ನು ಕೇವಲ 34.80 ಲಕ್ಷಕ್ಕೆ ಹರಾಜು ಮಾಡಿ ಮೋಸ ಮಾಡಲಾಗಿದೆ. ರೈತ 5 ಲಕ್ಷ ಕಟ್ಟಿದರೂ ಜಮೀನು ವಾಪಸ್ ಇಲ್ಲ. ನಾಗರಾಜ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದು ಅಮಾನವೀಯ, ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಹೇಳಿದರು.
ತಾ. ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ, “ಕಾಪೆರ್Çರೇಟ್ ಕಂಪನಿಗಳ ಕೋಟ್ಯಂತರ ಸಾಲ ಮನ್ನಾ ಮಾಡುವ ಸರ್ಕಾರಗಳು ಅನ್ನದಾತನಿಗೆ ಜಪ್ತಿ ಮಾಡುವುದು ಸರಿಯಲ್ಲ. ಅನ್ನ ನೀಡುವ ರೈತನಿಗೆ ಅನ್ಯಾಯ. ಕರ್ನಾಟಕ ಬ್ಯಾಂಕ್ ಕೂಡಲೇ ಹರಾಜು ರದ್ದು ಮಾಡಿ ಜಮೀನು ವಾಪಸ್ ನೀಡಬೇಕು. ಎಲ್ಲಾ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡುತ್ತೇವೆ” ಎಂದರು.
ರೈತ ಸಂಘದ ತಾ. ಕಾರ್ಯದರ್ಶಿ ಶಬ್ಬೀರ್ ಮಾತನಾಡಿ,”ಇದು ಒಬ್ಬ ರೈತನ ಸಮಸ್ಯೆ ಅಲ್ಲ, ಇಡೀ ಸಮುದಾಯದ ಸಮಸ್ಯೆ. ಬ್ಯಾಂಕ್ 9 ಲಕ್ಷಕ್ಕೆ ಇತ್ಯರ್ಥಕ್ಕೆ ಒಪ್ಪಿ 5 ಲಕ್ಷ ಡಿಡಿ ಪಡೆದು ಎರಡು ವರ್ಷ ಸತಾಯಿಸುತ್ತಿದೆ. ನಾಗರಾಜ್ ಆತ್ಮಹತ್ಯೆ ಯತ್ನಕ್ಕೆ ಬ್ಯಾಂಕ್ ಹೊಣೆ. ಜಮೀನು ವಾಪಸ್ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಸಿದರು.
ನ.2 ಹೋರಾಟ: ನ.2 ಸೋಮವಾರ ಬೆಳಗ್ಗೆ 11 ಗಂಟೆಗೆ ತುರುವೇಕೆರೆ ಕರ್ನಾಟಕ ಬ್ಯಾಂಕ್ ಎದುರು ನಡೆಯುವ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಎಲ್ಲಾ ಜಿಲ್ಲೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಈ ವೇಳೆ ದೊಡ್ಡಮಾಳಯ್ಯ, ತಾ. ಉಪಾಧ್ಯಕ್ಷ ರಂಗಹನುಮಯ್ಯ, ನಿವೃತ್ತ ತಹಶೀಲ್ದಾರ್ ವಾಸುದೇವರಾವ್, ನಗರ ಘಟಕ ಅಧ್ಯಕ್ಷ ಮಾರುತಿ, ಪ್ರಧಾನ ಕಾರ್ಯದರ್ಶಿ ಕೆ.ಆರ್. ರಾಕೇಶ್, ಗೌರವಾಧ್ಯಕ್ಷ ನರಸಿಂಹಮೂರ್ತಿ, ಮೂಡ್ಲಪ್ಪ, ರಾಮಕೃಷ್ಣ, ಲಕ್ಷ್ಮೀಪತಿ, ಶ್ರೀನಿವಾಸ್, ಲಕ್ಷ್ಮಣ ಕೆ.ವಿ, ರಂಗಯ್ಯ, ದಿನೇಶ್, ಹೇಮಂತ, ಮಂಜುನಾಥ ಸೇರಿದಂತೆ ಇತರರು ಇದ್ದರು.

(Visited 1 times, 1 visits today)