ತುಮಕೂರು: ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಬಿ.ಕಾಂ. ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎದುರಾಗಿರುವ ಶೈಕ್ಷಣಿಕ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕುಲಪತಿ ಆಪ್ತ ಸಹಾಯಕ ಸುರೇಶಾಚರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರವೇಶದ ಸಂದರ್ಭದಲ್ಲಿ ಲ್ಯಾಟರಲ್ ಎಂಟ್ರಿಗೆ ಸಂಬಂಧಿಸಿದ ನಿಯಮಗಳು ಹಾಗೂ ಹಿಂದಿನ ಸೆಮಿಸ್ಟರ್ಗಳ ಪರೀಕ್ಷೆ ಬರೆಯುವ ಕುರಿತು ಸಮರ್ಪಕ ಮಾಹಿತಿ ನೀಡಿರಲಿಲ್ಲ. ಇದೀಗ ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ಗಳ ಪರೀಕ್ಷೆಗಳನ್ನು ಬರೆಯಬೇಕೆಂದು ತಿಳಿಸಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳ ತಪ್ಪಿಲ್ಲದಿದ್ದರೆ ಅವರ ಶೈಕ್ಷಣಿಕ ವರ್ಷ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ನಿಯಮಗಳನ್ನು ಪರಿಶೀಲಿಸಿ, ಪರೀಕ್ಷಾ ಗೊಂದಲ ನಿವಾರಿಸಿ, ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡುವ ಮೂಲಕ ನ್ಯಾಯ ಒದಗಿಸಬೇಕೆಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಮೊಹಮ್ಮದ್ ಜೈದ್, ಮುರುಳಿ ಗೌಡ, ಮಿಥುನ್, ಸುಹಾಸ್, ಮನೋಜ್ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.
(Visited 1 times, 1 visits today)



