ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಮೇಡಿ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ, ಬೀದಿ ದೀಪಗಳ ಅಭಾವ, ರಸ್ತೆ ಮತ್ತು ಸ್ವಚ್ಛತೆಯ ಸಮಸ್ಯೆಗಳಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮದಲ್ಲಿ ಕೇವಲ ಒಂದೇ ಒಂದು ಬೀದಿ ದೀಪವಿದ್ದು, ರಾತ್ರಿ ವೇಳೆ ಜನರು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಕ್ಕೆ ಮಂಜೂರಾಗಿದ್ದ ಹೈಮಾಸ್ಟ್ ದೀಪವನ್ನು ಪ್ರಭಾವ ಬಳಸಿ ಕನ್ನಮೇಡಿ ಗ್ರಾಮಕ್ಕೆ ವರ್ಗಾಯಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದೀಪದ ಕಂಬ ಅಳವಡಿಸಲು ನಿರ್ಮಿಸಲಾಗಿದ್ದ ಪಿಲ್ಲರ್ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ ಎಂದು ದೂರಿದ್ದಾರೆ.
ಗ್ರಾಮದ ನಾಗೇಶ್ ಮಾತನಾಡಿ, ಕುಡಿಯುವ ನೀರಿಗಾಗಿ ಜನರು ಮೂರ್ನಾಲ್ಕು ಕಿಲೋಮೀಟರ್ ದೂರದ ಖಾಸಗಿ ಜಮೀನುಗಳಿಗೆ ತೆರಳಿ ನೀರು ತರುವ ದುಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮಕ್ಕೆ ಭೇಟಿ ನೀಡಿದ ಚೆನ್ನಕೇಶವಪುರ ತಾಲೂಕು ಪಂಚಾಯಿತಿ ಕ್ಷೇತ್ರದ ಜೆಡಿಎಸ್ ಆಕಾಂಕ್ಷಿ ವಿಷ್ಣು ನಂದೀಶ್ವರಡು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಸುಮಾರು 80 ವರ್ಷಗಳಾದರೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆ ಮತ್ತು ನೈರ್ಮಲ್ಯದಂತಹ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಬೇಸರದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಚೆನ್ನಕೇಶವಪುರ ತಾಲೂಕು ಪಂಚಾಯಿತಿ ಕ್ಷೇತ್ರವು ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ವಿದ್ಯಾವಂತ ಯುವಕರು ರಾಜಕೀಯಕ್ಕೆ ಪ್ರವೇಶಿಸಿ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಉದ್ದೇಶದಿಂದ ತಾವು ಮುಂದಾಗಿರುವುದಾಗಿ ವಿಷ್ಣು ನಂದೀಶ್ವರಡು ತಿಳಿಸಿದರು.
ಒಟ್ಟಿನಲ್ಲಿ, ಹೊನ್ನಮೇಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

(Visited 1 times, 1 visits today)