ತುಮಕೂರು: ಕನ್ನಡದ ಮೂಲಕ ಇಂಗ್ಲಿಷ್ ಅನ್ನು ಕಾಣಬೇಕು. ಇಂಗ್ಲಿಷ್ನ ಮೂಲಕ ಕನ್ನಡವನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಭಾಷೆಗಳನ್ನು ನಾವೇ ಸಂವೃದ್ಧಿಗೊಳಿಸುವ ಮೂಲಕ ಜಗತ್ತಿನ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ರಂಗನಿರ್ದೇಶಕರಾದ ರಘುನಂದನ ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಅ.27ರ ಮಂಗಳವಾರದಂದು ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡರ ಹಯವದನ, ಯಯಾತಿ, ತಲೆದಂಡ ನಾಟಕಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ಕನ್ನಡ ನಮ್ಮ ಬದುಕಿನ ಪ್ರತಿದಿನದ ಭಾಷೆಯಾಗಬೇಕು. ನಿತ್ಯಕನ್ನಡವು ವಿಶ್ವಕನ್ನಡವಾಗಿ ಬೆಳೆಯಬೇಕು. ಭಾಷೆಯ ಮೇಲಿನ ಪ್ರೀತಿ ಒಂದು ತಿಂಗಳ ಆಚರಣೆಗೆ ಸೀಮಿತವಾಗದೆ, ನಮ್ಮ ಆಲೋಚನೆ, ಅಭಿವ್ಯಕ್ತಿ ಹಾಗೂ ಜೀವನದ ಭಾಗವಾಗಬೇಕು ಎಂದರು.
ಗಿರೀಶ್ ಕಾರ್ನಾಡರು ಕನ್ನಡ ಭಾಷೆಗೆ ಅಪಾರ ಕೊಡುಗೆ ನೀಡಿದವರು. ಕನ್ನಡದ ಮೂಲಕ ಜಗತ್ತನ್ನು ಕಾಣಲು ಪ್ರಯತ್ನಿಸಿದ ಅವರು, ತಮ್ಮ ಸಾಹಿತ್ಯ ಮತ್ತು ನಾಟಕಗಳ ಮೂಲಕ ಭಾರತೀಯ ಸಮಾಜದ ಸಂಕೀರ್ಣತೆಗಳನ್ನು ಅನಾವರಣಗೊಳಿಸಿದರು. ಅವರಲ್ಲಿದ್ದ ಕ್ರಿಯಾಶೀಲತೆ, ಅಚಲ ಶ್ರದ್ಧೆ ಮತ್ತು ಧೈರ್ಯ ಇಂದಿನ ಯುವಜನರಿಗೆ ಅತ್ಯಗತ್ಯವಾದ ಗುಣಗಳಾಗಿವೆ ಎಂದು ರಘುನಂದನ ಅಭಿಪ್ರಾಯಪಟ್ಟರು.
ಕಲ್ಯಾಣ ಎನ್ನುವುದು ಕೇವಲ ಆಶಯ ಅಥವಾ ಕನಸಿನಿಂದ ಸಾಕಾರಗೊಳ್ಳುವುದಿಲ್ಲ. ಅದನ್ನು ನಾವೆಲ್ಲರೂ ನಿರಂತರ ಪರಿಶ್ರಮ, ಬದ್ಧತೆ ಮತ್ತು ಕ್ರಿಯಾಶೀಲತೆಯ ಮೂಲಕ ಸಾಧಿಸಿಕೊಳ್ಳಬೇಕು. ಯುವಜನರು ಓದು, ಚಿಂತನೆ ಮತ್ತು ಸೃಜನಶೀಲತೆಯ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಎಸ್. ಶ್ರೀನಿವಾಸ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಜ್ಯೋತಿ, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ಕುಮಾರ್ ಜಿ.ಆರ್. ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಭರತ್ ಶಿಲ್ಪಿ ಉಪಸ್ಥಿತರಿದ್ದರು.
(Visited 1 times, 1 visits today)



