ತುಮಕೂರು: ರಾಜ್ಯ ಸರಕಾರದ ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಇದುವರೆಗೂ ಬಾಕಿ ಇರುವ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನು ಮುಂದಿನ ಡಿಸೆಂಬರ್ ಅಂತ್ಯದೊಳಗೆ ಕೊರೆದು, ವಿದ್ಯುದ್ದೀಕರಣಗೊಳಿಸಿ, ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಾ: ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬೆಂಗಳೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ ನೀನೋ ಇರುವುದರಿಂದ ಕೃಷಿಗೆ ನೀರು ಒದಗಿಸಿದರೆ ಜನ ನಿಮ್ಮನ್ನು, ನಿಗಮವನ್ನು ದೇವರಂತೆ ಭಾವಿಸುತ್ತಾರೆ. ಹಾಗಾಗಿ ಅಧಿಕಾರಿಗಳು 2025-26ನೇ ಸಾಲಿನವರೆಗೆ ಬಾಕಿ ಇರುವ ಎಲ್ಲಾ ಕೊಳವೆ ಬಾವಿಗಳನ್ನು ಕೊರೆಯಿಸಿ, ವಿದ್ಯುದ್ದೀಕರಣಗೊಳಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಜಿಲ್ಲಾ ವ್ಯವಸ್ಥಾಪಕರಿಗೆ ಮತ್ತು ತಾಲೂಕು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುವ ಅಧಿಕಾರಿಗಳು ನೇರವಾಗಿ ಫಲಾನುಭವಿಗಳೊಂದಿಗೆ ಕೆಲಸ ಮಾಡುವುದರಿಂದ ಬಡವರಿಗೆ ನೆರವಾಗಲು ಸಾಧ್ಯವಿದೆ. ಹಾಗಾಗಿ ಅಧಿಕಾರಿಗಳು ಡ್ರಿಲಿಂಗ್ ಏಜೆನ್ಸಿಯೊಂದಿಗೆ ನಿರಂತರ ಸಂಪರ್ಕ ಹೊಂದಿ, ಬೇಗ ಬೇಗ ಕೊಳವೆ ಬಾವಿ ಕೊರೆಯಲು ಕ್ರಮ ಕೈಗೊಳ್ಳಬೇಕು. ಹಾಗೆಯೇ ಬೆಸ್ಕಾಂ ಅಧಿಕಾರಿಗಳ ಜೊತೆಗೂಡಿ ವಿದ್ಯುತ್ ಸಂಪರ್ಕ ನೀಡಿ, ಪಂಪು ಮೋಟಾರು ನೀಡಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ. ಇದರಿಂದ ನಿಗಮಕ್ಕೂ ಒಳ್ಳೆಯ ಹೆಸರು, ನಿಮಗೂ ಹೆಸರು ಬರಲಿದೆ. ಶಾಸಕರ ಆಯ್ಕೆ ಪಟ್ಟಿಯ ಜೊತೆಗೆ, ನಿಗಮದಿಂದ ಬಂದ ಪಟ್ಟಿಯನ್ನು ಪರಿಶೀಲನೆ ಮಾಡಿ, ದಾಖಲೆ ಸಂಗ್ರಹಿಸಿ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಸಭೆಗೆ ಬಾರದ ಅಧಿಕಾರಿಗಳಿಗೆ ನೋಟೀಸ್: ಬೆಂಗಳೂರು ವಿಭಾಗೀಯ ಮಟ್ಟದ ಸಭೆಯಾಗಿದ್ದರು, 9 ಜಿಲ್ಲೆಗಳ ತಾಲೂಕುಗಳ ತಾಲೂಕು ಅಭಿವೃದ್ಧಿ ಅಧಿಕಾರಿಗಳಲ್ಲಿ ಕೆಲವರು ಸಭೆಗೆ ಪೂರ್ವ ಅನುಮತಿ ಪಡೆಯದೆ ಗೈರು ಹಾಜರಾಗಿದ್ದಾರೆ. ಇವರಿಗೆ ನೋಟೀಸ್ ನೀಡುವಂತೆ ಸೂಚಿಸಿದ ಅಧ್ಯಕ್ಷರು, ಸಭೆಗೆ ಬರುವಾಗ ಅಧಿಕೃತ ಮಾಹಿತಿಯೊಂದಿಗೆ ಬರಬೇಕು. ಸಭೆಗೆ ತಪ್ಪು ಮಾಹಿತಿ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಸಿ.ನರೇಂದ್ರ ಅವರು, ಭೌತಿಕ ಮತ್ತು ಅರ್ಥಿಕ ಗುರಿಯ ನಡುವೆ ವ್ಯತ್ಯಾಸ ಇರಬಾರದು. ಕೊಳವೆ ಬಾವಿ ಕೊರದವರಿಗೆ ಹಣ ನೀಡುವ ಅಧಿಕಾರವನ್ನು ನಿಮಗೆ ನೀಡಿದ್ದೆವೆ. ಹಾಗಾಗಿ ತ್ವರಿತವಾಗಿ ಕೆಲಸ ಮಾಡಿ, ಕೊಳವೆ ಬಾವಿ ಕೊರೆಯಲು ನಿರ್ಲಕ್ಷ್ಯ ತೋರುವ ಡ್ರಿಲಿಂಗ್ ಏಜೆನ್ಸಿಯ ವಿರುದ್ದ ಲಿಖಿತ ದೂರು ನೀಡಿದರೆ ಯಾವುದೇ ಮುಲಾಜಿಲ್ಲದೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ, ಮುಂದೆ ಯಾವುದೇ ಗ್ಲೋಬಲ್ ಟೆಂಡರ್‍ನಲ್ಲಿ ಭಾಗವಹಿಸದಂತೆ ಮಾಡುವುದಾಗಿ ಭರವಸೆ ನೀಡಿದರು.
ಗಂಗಾಕಲ್ಯಾಣ ಮತ್ತು ಇನ್ನಿತರ ಯೋಜನೆಗಳಲ್ಲಿ ಶಾಸಕರಿಗೆ ಶೇ.80, ಅಧಿಕಾರಿಗಳು ಮತ್ತು ನಿಗಮದ ಅಧ್ಯಕ್ಷರಿಗೆ ತಲಾ ಶೇ.10ರಷ್ಟು ಫಲಾನುಭವಿಗಳ ಆಯ್ಕೆಗೆ ಅವಕಾಶವಿದೆ. ಹಾಗಾಗಿ ಶಾಸಕರ ಆಯ್ಕೆ ಪಟ್ಟಿಯಿಂದ ಹೊರಗೆ ಉಳಿಯುವ ಆರ್ಹರು ನಿಮ್ಮ ಬಳಿ ಬಂದರೆ ಅಂತಹವರನ್ನು ನಮ್ಮ ಪಟ್ಟಿಗೆ ಸೇರಿಸಿ ಕಳುಹಿಸಿ, ಆರ್ಹರಿದ್ದರೆ ಅಂತಹವರನ್ನು ಪರಿಗಣಿಸಿ, ನಿಗಮದಿಂದ ಸಹಾಯ ಮಾಡಿದರೆ, ಬಡವರು ನಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅವರ ಕುಟುಂಬ ಬದುಕುತ್ತವೆ. ಹಾಗಾಗಿ ಅರ್ಹರನ್ನು ಶಿಫಾರಸ್ಸು ಇಲ್ಲದಿದ್ದರೂ ಪರಿಗಣಿಸಿ ಎಂದು ಅಧ್ಯಕ್ಷ ಸಿ. ನರೇಂದ್ರ ಕಿವಿ ಮಾತು ಹೇಳಿದರು.
ನೇರ ಸಾಲ, ಸ್ವಾವಲಂಬಿ ಸಾರಥಿ, ಶೈಕ್ಷಣಿಕ ಸಾಲ, ವಿದೇಶಿ ಶಿಕ್ಷಣಕ್ಕೆ ನೆರವು ಸೇರಿದಂತೆ ಎಲ್ಲಾ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಮುಗಿಸಲು ಅಗತ್ಯ ಕ್ರಮವನ್ನು ಅಧಿಕಾರಿಗಳು ಮಾಡಬೇಕು. ಅಲ್ಲದೆ ನಿಗಮದಿಂದ ಈಗಾಗಲೇ ಒಂದು ಬಾರಿ 5ಸಾವಿರದಿಂದ ಒಂದು ಲಕ್ಷದವರೆಗೆ ಸಾಲ ಪಡೆದು ಐದು ವರ್ಷ ಕಳೆದಿದ್ದರೆ, ಮತ್ತೊಮ್ಮೆ ಅವರು ನಿಗಮದಲ್ಲಿ ಸಾಲ ಪಡೆಯಲು ಆರ್ಹರಿದ್ದಾರೆ. ಹಾಗಾಗಿ ಇಂತಹವರ ಅರ್ಜಿಗಳನ್ನು ಪರಿಗಣಿಸಲು ಎಲ್ಲಾ ಜಿಲ್ಲಾ ವ್ಯವಸ್ಥಾಪಕರು ಮತ್ತು ತಾಲೂಕು ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಿಗಮದ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ದೇವರಾಜು ಮಾತನಾಡಿ, ನಿಗಮದ ಕಾರ್ಯಕ್ರಮಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ವಿಭಾಗೀಯ ಮಟ್ಟಕ್ಕೆ ತರಲಾಗಿದೆ. ಇಲಾಖೆಯ ಪ್ರಗತಿಯ ಜೊತೆಗೆ, ಅಧಿಕಾರಿಗಳು ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆಯೂ ತಿಳಿದುಕೊಳ್ಳುವ ಉದ್ದೇಶ ಇದಾಗಿದೆ. ಅಗತ್ಯ ಬಿದ್ದರೆ ನಾವು ಸಹ ಶಾಸಕರೊಂದಿಗೆ, ಸಂಬಂಧಿಸಿದ ಮಂತ್ರಿಗಳೊಂದಿಗೆ ಮಾತನಾಡುತ್ತೇವೆ. ಇದೇ ನವೆಂಬರ್ 26ಕ್ಕೆ ಸಂವಿಧಾನದ ದಿನದಂದು 100 ಸ್ವಾವಲಂಬಿ ಸಾರಥಿ, 100 ವಾಹನ ನೀಡುವ ಗುರಿ ಇದೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.
ವೇದಿಕೆಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಸರಸ್ವತಿ, ಬೆಂಗಳೂರು ವಿಭಾಗೀಯ ಜಿ.ಎಂ.ಗಳಾದ ಶುಭ ಸಿ., ಪ್ರತಿಭಾ, ಹೇಮಂತ್, ತುಮಕೂರು ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಎಸ್.ಎಂ ಉಪಸ್ಥಿತರಿದ್ದರು.

(Visited 1 times, 1 visits today)