ಕೊರಟಗೆರೆ: ಕರ್ನಾಟಕದಲ್ಲಿ ವಕೀಲರ ಮೇಲಿನ ಹಲ್ಲೆ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ ಹಾಗೂ ವಕೀಲರ ಸುರಕ್ಷತಾ ಕಾಯ್ದೆ ಜಾರಿಗೆ ಹೊತ್ತಾಯಿಸಿ ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಸರಣಿ ದೌರ್ಜನ್ಯ, ಹಲ್ಲೆ ಮತ್ತು ಹತ್ಯೆಯನ್ನು ಖಂಡಿಸಿ ಇಂದು ಕೊರಟಗೆರೆ ತಾಲ್ಲೂಕು ವಕೀಲರ ಸಂಘದಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಯಿತು.
ಬೆಂಗಳೂರು ವಕೀಲರ ಸಂಘದ ಕರೆ ಮೇರೆಗೆ ರಾಜ್ಯಾದ್ಯಂತ ನಡೆದ ಪ್ರತಿಭಟನೆಯ ಭಾಗವಾಗಿ, ಇಂದು ಬೆಳಿಗ್ಗೆ ಕೊರಟಗೆರೆಯ ಜೆ.ಎಂ.ಎಫ್.ಸಿ ನ್ಯಾಯಾಲಯ ಆವರಣದಿಂದ ತಾಲ್ಲೂಕು ಕಚೇರಿವರೆಗೆ ವಕೀಲರು ಬ್ಯಾನರ್ ಹಿಡಿದು ಜಾಥಾ ನಡೆಸಿದರು.
ನಂತರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಕೊರಟಗೆರೆ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ವಕೀಲರ ಒಗ್ಗಟ್ಟು ಪ್ರದರ್ಶಿಸಿದರು. ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗೌರಿಬಿದನೂರಿನ ಹಿರಿಯ ವಕೀಲ ವೆಂಕಟರಮಣ ಸಣ್ಣಕ್ಕಿ ಮೇಲೆ ನಡೆದ ಕೊಲೆ ಯತ್ನ, ಬೆಂಗಳೂರಿನ ವೈಟ್ಫೀಲ್ಡ್ನ ವಕೀಲ ಮಂಜುನಾಥ್ ಶ್ರೀರಾಮ್ ಮತ್ತು ಅನ್ನಪೂರ್ಣೇಶ್ವರಿ ನಗರದ ವಕೀಲರ ಹತ್ಯೆಯನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಲ್.ಸಂತೋಷ್ ಮಾತನಾಡಿ,”ನ್ಯಾಯಕ್ಕಾಗಿ ಹೋರಾಡುವ ವಕೀಲರಿಗೇ ಇಂದು ರಕ್ಷಣೆ ಇಲ್ಲದಂತಾಗಿದೆ. ವಕೀಲರ ಮೇಲೆ ಹಲ್ಲೆ ಮಾಡಿದರೆ ಅದು ನ್ಯಾಯ ವ್ಯವಸ್ಥೆಯ ಮೇಲೆ ಮಾಡಿದ ದಾಳಿ. ಸರ್ಕಾರ ಕೂಡಲೇ ವಕೀಲರ ಸುರಕ್ಷತಾ ಕಾಯ್ದೆಯನ್ನು ಬಲಪಡಿಸಿ, ವಕೀಲರಿಗೆ ಸೂಕ್ತ ಭದ್ರತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದರು.
ಹಿರಿಯ ವಕೀಲ ಟಿ.ಕೃಷ್ಣಮೂರ್ತಿ ಮಾತನಾಡಿ, “ವಕೀಲ ವೃತ್ತಿ ಎಂದರೆ ಸಮಾಜದ ಕಣ್ಣು. ನಮ್ಮನ್ನು ಬೆದರಿಸಿ, ಹಲ್ಲೆ ಮಾಡಿ ನ್ಯಾಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಗೌರಿಬಿದನೂರು, ಬೆಂಗಳೂರಿನಲ್ಲಿ ನಡೆದ ಘಟನೆಗಳು ಇಡೀ ವಕೀಲ ಸಮುದಾಯವನ್ನು ಬೆಚ್ಚಿ ಬೀಳಿಸಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು” ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಎಲ್.ನಾಗರಾಜು ಮಾತನಾಡಿ,”ವಕೀಲರ ಮೇಲೆ ನಡೆಯುತ್ತಿರುವ ದಾಳಿ ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ, ಇದು ಸಂವಿಧಾನದ ಮೇಲೆ, ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ. ನಾವು ಕೋರ್ಟ್ ನಲ್ಲಿ ಕಕ್ಷಿದಾರರ ಪರ ವಾದ ಮಾಡುತ್ತೇವೆ ಅಂತ ನಮ್ಮನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ವಕೀಲರ ರಕ್ಷಣಾ ಕಾಯ್ದೆಗೆ ಬಲ ತುಂಬಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕಲಾಪ ಬಹಿಷ್ಕಾರವನ್ನೇ ಮುಂದುವರೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಎಸ್.ಎನ್.ಹನುಮಂತರಾಜು, ಕಾರ್ಯದರ್ಶಿ ಎಂ.ಎಚ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಡಿ.ಕೆ.ಕೃಷ್ಣ, ಡಿ.ಜಿ.ತಿಮ್ಮರಾಜು, ಜಿ.ಎಂ.ಕೃಷ್ಣಮೂರ್ತಿ, ಮಧುಸೂಧನ್, ಕೆ.ಜೆ.ನಾಗರಾಜ್, ಸಂತೋಷ್ ಲಕ್ಷ್ಮಿ, ಶಿಲ್ಪಾ, ಕೆಂಪರಾಜು, ಮಂಜುಳ, ಮನು, ಕೃಷ್ಣಮೂರ್ತಿ, ನಾಗೇಂದ್ರಪ್ಪ, ಅನಿಲ್, ಮಲ್ಲಿಕಾರ್ಜುನಯ್ಯ, ಪುಟ್ಟರಾಜು, ಹರೀಶ್, ಶಿವರಾಮಯ್ಯ ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು ಭಾಗವಹಿಸಿದ್ದರು.
(Visited 1 times, 1 visits today)



