ಪಾವಗಡ: ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಶಿಕ್ಷಣ ಇಲಾಖೆಯ ಇಸಿಓ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಭೀಕರ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟುಬಿದ್ದಿರುವ ಅವರು, ತುಮಕೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದ್ದಾರೆಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ಸುಮಾರು 8:30ರ ವೇಳೆಗೆ ತುಮಕೂರು ಕಡೆಯಿಂದ ಪಾವಗಡಕ್ಕೆ ದ್ವಿಚಕ್ರ ವಾಹನದಲ್ಲಿ ಬರುವಾಗ ಇಸಿಓ ಶಿವಕುಮಾರ್ ಅವರು, ಕಣಿವೆ ಪ್ರದೇಶದ ಅಪಾಯಕಾರಿ ರಸ್ತೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ಅವರನ್ನು ತಕ್ಷಣವೇ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾವಗಡ ತುಮಕೂರು ಚತುಷ್ಪಥ ಜಂಕ್ಷನ್‍ನಲ್ಲಿ ಇತ್ತೀಚೆಗೆ ಕಾಮಗಾರಿಗಾಗಿ ರಸ್ತೆಯನ್ನು ಆಳವಾಗಿ ಅಗೆಯಲಾಗಿತ್ತು. ಕಾಮಗಾರಿ ಮುಗಿದ ನಂತರ ರಸ್ತೆಯನ್ನು ಸರಿಯಾಗಿ ಮುಚ್ಚದೆ, ದುರಸ್ತಿಯನ್ನೂ ಮಾಡದೆ ಕೇವಲ ಎರಡು ಬ್ಯಾರಿಕೇಡ್‍ಗಳನ್ನು ಇಟ್ಟು ಅಧಿಕಾರಿಗಳು ಜಾರಿಕೊಂಡಿದ್ದಾರೆ. ರಾತ್ರಿ ವೇಳೆ ಯಾವುದೇ ಎಚ್ಚರಿಕೆ ಫಲಕ ಅಥವಾ ದೀಪದ ವ್ಯವಸ್ಥೆ ಇಲ್ಲದೆ, ಈ ಅಪಾಯಕಾರಿ ಗುಂಡಿ ಮತ್ತು ಬ್ಯಾರಿಕೇಡ್‍ಗಳು ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ.
ಈ ರಸ್ತೆಯ ಭೀಕರ ಸ್ಥಿತಿ ಕುರಿತು ಕಳೆದ ತಿಂಗಳಷ್ಟೇ ಮಾಧ್ಯಮಗಳಲ್ಲಿ ವ್ಯಾಪಕ ವರದಿಗಳು ಪ್ರಕಟವಾಗಿದ್ದವು. ಆದಾಗ್ಯೂ, ತಾಲೂಕು ಆಡಳಿತವಾಗಲಿ ಅಥವಾ ಲೋಕೋಪಯೋಗಿ ಇಲಾಖೆಯ ಉನ್ನತಾಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳ ಈ ಉಡಾಫೆ ವರ್ತನೆಗೆ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಮುಖಂಡ ರಾಮಾಂಜಿ ಯವರು ಕಳೆದ ತಿಂಗಳು ರಾಜವಂತಿ ಗ್ರಾಮದ ವ್ಯಕ್ತಿಯೊಬ್ಬರು ಇದೇ ಸ್ಥಳದಲ್ಲಿ ಅಪಘಾತಕ್ಕೆ ಈಡಾಗಿದ್ದರು. ಆಗ ನಾವೇ ಸ್ವಯಂಪ್ರೇರಿತವಾಗಿ ವಿಡಿಯೋ ಮಾಡಿ ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆವು. ಆದರೆ ಪಿಡಬ್ಲ್ಯೂಡಿ ಅಧಿಕಾರಿಗಳ ಜಡತ್ವದಿಂದಾಗಿ ಇಂದು ಶಿಕ್ಷಣಾಧಿಕಾರಿಯೊಬ್ಬರು ಜೀವನ್ಮರಣ ಹೋರಾಟ ನಡೆಸುವಂತಾಗಿದೆ. ತಕ್ಷಣವೇ ಈ ರಸ್ತೆಯನ್ನು ವೈಜ್ಞಾನಿಕವಾಗಿ ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ತಾಲೂಕು ಆಡಳಿತದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳುತ್ತದೆಯೇ? ಅಥವಾ ಮತ್ತಷ್ಟು ಅಮಾಯಕ ಜೀವಗಳು ಈ ಮೃತ್ಯುಕೂಪಕ್ಕೆ ಬಲಿಯಾಗುವವರೆಗೆ ಕಾಯುತ್ತದೆಯೇ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ.

(Visited 1 times, 1 visits today)