ತುಮಕೂರು: ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರದಲ್ಲಿ ರೋಟರಿ ಬೆಂಗಳೂರು ಉದ್ಯೋಗ್, ರೋಟರಿಜಿಲ್ಲೆ 3192ರ ಸಹಯೋಗದೊಂದಿಗೆ ನೂತನ ಫಿಸಿಯೋಥೆರಪಿ ಸೌಲಭ್ಯ ಹಾಗೂ ಹೋಂ ಕೇರ್ (ಮನೆಬಾಗಿಲಿಗೆ ಆರೋಗ್ಯ ಸೇವೆ) ಸೌಲಭ್ಯಗಳನ್ನು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸ್ವಾಮೀಜಿ, ಆರೋಗ್ಯ ಎಲ್ಲರ ಆದ್ಯತೆಯಾಗಬೇಕು. ಇಂದಿನ ಒತ್ತಡದ ಬದುಕಿನಲ್ಲಿ ಎಲ್ಲಾ ಭಾಗ್ಯಕ್ಕಿಂಥಾ ಆರೋಗ್ಯ ಭಾಗ್ಯ ಮುಖ್ಯ ಎನ್ನುವಂತಾಗಿದೆ.ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಎಚ್ಚರಿಕೆ ವಹಿಸಬೇಕು. ರೋಟರಿಯಂತಹ ಸೇವಾ ಸಂಸ್ಥೆಗಳು ಆರೋಗ್ಯ ಸೇವೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.
ನಿರಾಮ್ ಪ್ಯಾಲಿಯೇಟಿವ್ ಕೇರ್ ಕೇಂದ್ರವು ರೋಟರಿ ಸಂಸ್ಥೆ ಸಹಯೋಗದೊಂದಿಗೆ ನೂತನ ಫಿಸಿಯೋಥೆರಪಿ ಸೌಲಭ್ಯ ಹಾಗೂ ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಯೋಜನೆ ಆರಂಭಿಸಿರುವುದು ಉತ್ತಮ ಸೇವೆ. ವಯೋವೃದ್ಧರಿಗೆ, ಒಬ್ಬಂಟಿ ಇರುವವರಿಗೆ, ಅಸಹಾಯಕರಿಗೆ ಅವರ ಮನೆಗೆ ಹೋಗಿ ಆರೋಗ್ಯ ಸೇವೆ ಒದಗಿಸುವ ಕಾರ್ಯ ಉತ್ತಮವಾದದ್ದು, ಸಂಸ್ಥೆಗಳು ಇಂತಹ ಮತ್ತಷ್ಟು ಸೇವೆಗಳನ್ನು ಮಾಡಲಿ ಎಂದು ಸ್ವಾಮೀಜಿ ಆಶಿಸಿದರು.
ಈ ಯೋಜನೆಯ ನೇತೃತ್ವ ವಹಿಸಿರುವ ರೋಟರಿ ಜಿಲ್ಲೆ 3192ರ ಜಿಲ್ಲಾ ನಿಯೋಜಿತ ಗವರ್ನರ್ ರೊಟೇರಿಯನ್ ರೇಣುಕೇಶ್ವರಸ್ವಾಮಿ ಎಸ್.ಆರ್.ಅವರು ಮಾತನಾಡಿ, ರೋಟರಿಯ ಸೇವೆ ಕೇವಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಸೀಮಿತವಾಗಿರದೆ, ಅಗತ್ಯವಿರುವವರ ಬದುಕಿನಲ್ಲಿ ಭರವಸೆ, ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವುದಾಗಿದೆ. ನಿರಾಮ್ ಕೇಂದ್ರದೊಂದಿಗೆ ಕೈಜೋಡಿಸಿರುವ ಈ ಯೋಜನೆಯು ಸಮಾಜಕ್ಕೆ ದೀರ್ಘಕಾಲದ ಪ್ರಯೋಜನ ನೀಡಲಿದೆ ಎಂದು ತಿಳಿಸಿದರು.
ಕ್ವೆಸ್ಕಾರ್ಪ್ ಸಂಸ್ಥಾಪಕ ಅಧ್ಯಕ್ಷ ಅಜಿತ್ ಐಸಾಕ್ ಅತಿಥಿಯಾಗಿ ಭಾಗವಹಿಸಿದ್ದರು. ಈ ಯೋಜನೆಯಡಿ ಸ್ಥಾಪಿಸಲಾಗಿರುವ ಫಿಸಿಯೋಥೆರಪಿ ಘಟಕವು ಶಸ್ತ್ರಚಿಕಿತ್ಸೆ, ಅಪಘಾತ, ಪಾಶ್ರ್ವವಾಯು ಹಾಗೂ ವಿವಿಧ ಕಾಯಿಲೆಗಳಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಪುನರ್ವಸತಿ, ನೋವು ನಿವಾರಣೆ, ದೈಹಿಕ ಚಲನಶೀಲತೆ ಮತ್ತು ಹಿರಿಯ ನಾಗರಿಕರ ಆರೋಗ್ಯ ಸುಧಾರಣೆಗೆ ಅಗತ್ಯವಾದ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ. ಇದರೊಂದಿಗೆ, ಮನೆಗೆ ತೆರಳಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ವಿಶೇಷ ವಾಹನವನ್ನು ನಿರಾಮ್ ಕೇಂದ್ರಕ್ಕೆ ಈ ವೇಳೆ ಹಸ್ತಾಂತರಿಸಲಾಯಿತು. ಈ ಸೌಲಭ್ಯದ ಮೂಲಕ ವಯೋವೃದ್ಧರು, ಹಾಸಿಗೆ ಹಿಡಿದಿರುವ ರೋಗಿಗಳು, ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಆಸ್ಪತ್ರೆಗೆ ಪ್ರಯಾಣಿಸಲು ಸಾಧ್ಯವಾಗದವರಿಗೆ ಮನೆ ಬಾಗಿಲಲ್ಲೇ ನಸಿರ್ಂಗ್ ಸೇವೆ, ಪ್ಯಾಲಿಯೇಟಿವ್ ಕೇರ್, ಫಿಸಿಯೋಥೆರಪಿ ಮತ್ತು ಅಗತ್ಯ ವೈದ್ಯಕೀಯ ನೆರವು ದೊರೆಯಲಿದೆ.
ರೋಟರಿ ಬೆಂಗಳೂರು ಉದ್ಯೋಗ್ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ರೂಪುಗೊಂಡಿರುವ ಈ ಯೋಜನೆಯು ರೋಗಿಗಳಿಗೆ ಉತ್ತಮ ಆರೈಕೆ, ಕುಟುಂಬ ಸದಸ್ಯರಿಗೆ ಮಾನಸಿಕ ನೆಮ್ಮದಿ ಮತ್ತು ಸಮಾಜದ ದುರ್ಬಲ ವರ್ಗದವರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ರೋಟರಿ ಸದಸ್ಯರು, ವೈದ್ಯಕೀಯ ತಜ್ಞರು, ನಿರಾಮ್ ಕೇಂದ್ರದ ಸಿಬ್ಬಂದಿ, ಹಲವು ಗಣ್ಯರು ಭಾಗವಹಿಸಿದ್ದರು.
(Visited 1 times, 1 visits today)



